ಮೂಗೂರಿನಲ್ಲಿ ಬಂಡಿ ಉತ್ಸವ
ಮೂಗೂರು: ಮೂಗೂರು ಬಂಡಿ ಎಂದೇ ಖ್ಯಾತಿ ಪಡೆದ ಮುಕಾಸೂರನ ಮರ್ದಿನಿ ಪುಣ್ಯಕ್ಷೇತ್ರವೆನಿಸಿದ ಮೂಗೂರಿನಲ್ಲಿ ಶ್ರೀ ತ್ರಿಪುರಸುಂದರಮ್ಮನವರ ಬಂಡಿ ಜಾತ್ರೆ ಗುರುವಾರ ಬಹಳ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 11.30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡು ಅಮ್ಮನವರನ್ನು ದೇವಾಲಯ ಆವರಣದಲ್ಲಿ ಉತ್ಸವ ಮಾಡಿ, ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿದ ನಂತರ, ಶೃಂಗಾರಗೊಂಡ ಬಂಡಿಗೆ ಎತ್ತುಗಳನ್ನು ಕಟ್ಟಿ ಈಡುಗಾಯಿ ಸುರಿಮಳೆಗೈದ ನಂತರ, ರುದ್ರಾಕ್ಷಿ ಮಂಟಪದೊಂದಿಗೆ ಬಂಡಿ ಬೀದಿ ಅತ್ತ ಮೆರವಣಿಗೆ ಮೂಲಕ ಉತ್ಸವ ನಡೆಸಲಾಯಿತು. ಬಂಡಿಮಂಟಪ ತಲುಪಿದ ನಂತರ 12.45ಕ್ಕೆ ದೇವಿಗೆ ಪೂಜೆ ಮಹಾಮಂಗಳಾರತಿ ನೆರವೇರಿಸಿದ ನಂತರ ಬಂಡಿ ಓಟಕ್ಕೆ ಚಾಲನೆ ನೀಡಲಾಯಿತು ಪ್ರತಿ ವರ್ಷದಂತೆ ಈ ಬಾರಿಯು ಅನ್ನ ಸಂತರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಬ್ಬರು ಅಪರಿಚಿತರ ಶವ ಪತ್ತೆ
ಮೈಸೂರು: ನಗರದ ರೇಲ್ವೆ ನಿಲ್ದಾಣದ ಪ್ಲಾಟ್ಫಾರಂ ನಂ.5ರಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದೆ. ಮೃತರು 5 ಅಡಿ ಎತ್ತರ, ಕೃಶವಾದ ಶರೀರ, ಗೋಧಿ ಮೈಬಣ್ಣ, ಕೋಲು ಮುಖ. ಮತ್ತೊಂದು ಪ್ರಕರಣದಲ್ಲಿ ನಂಜನಗೂಡು ಕಡೆ ತೆರಳುವ ರೈಲು ಹಳಿಗಳ ಮಧ್ಯೆ ಸುಮಾರು 60 ವರ್ಷ ವಯಸ್ಸಿನ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದಾರೆ. ದೂ.2516579 ಸಂಪರ್ಕಿಸಿ.
ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸೆರೆ
ಮೈಸೂರು: ಗ್ರಾಹಕನಿಗೆ ಗೃಹ ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರು. ವಂಚಿಸಿದ್ದ ಆರೋಪಿಯನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮೂಲದ ವಿಶ್ವನಾಥ್ (48) ಬಂಧಿತ ಆರೋಪಿ. ಮೈಸೂರಿನ ಬೋಗಾದಿ ರಸ್ತೆಯ ಕರ್ಣಾಟಕ ಬ್ಯಾಂಕ್ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ್, ದಟ್ಟಗಳ್ಳಿ ನಿವಾಸಿ ಆನಂದ್ ಎಂಬವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸಹಿ ಮಾಡಿದ ಚೆಕ್ ಪುಸ್ತಕ, ದಾಖಲೆ ಪಡೆದು ಸಾಲ ಮಂಜೂರು ಮಾಡಿಸಿದ್ದರು. ಆದರೆ ದಾಖಲೆಗಳೆಲ್ಲಾ ವಿಶ್ವನಾಥ್ ಬಳಿ ಇದ್ದುದ್ದರಿಂದ ಸಹಿ ಮಾಡಿದ ಚೆಕ್ ಪುಸ್ತಕದ ಮೂಲಕ 16 ಲಕ್ಷ ಹಣ ಡ್ರಾ ಮಾಡಿಕೊಂಡು ಮೋಸ ಮಾಡಿದ್ದರು. ತನ್ನ ಖಾತೆಯಲ್ಲಿ ಹಣ ಇಲ್ಲದಿರುವುದರಿಂದ ಅನುಮಾನಗೊಂಡ ಆನಂದ್ ತನ್ನ ದಾಖಲೆ ಹಿಂದಿರುಗಿಸುವಂತೆ ವಿಶ್ವನಾಥ್ನನ್ನು ಒತ್ತಾಯಿಸಿದ್ದಾರೆ. ವಿಶ್ವನಾಥ್ ದಾಖಲೆ ಹಿಂದಿರುಗಿಸದಿದ್ದಾಗ ಆನಂದ್ ಅವರು ವಿಶ್ವನಾಥ್ ವಿರುದ್ಧ ಮೈಸೂರು ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ಮತ್ತು ಕುವೆಂಪುನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ವಿಶ್ವನಾಥ್ನನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಶ್ವನಾಥ್ ಸರಸ್ವತಿಪುರಂ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೂ ಮೂವರಿಗೆ ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಕಂದಕಕ್ಕೆಸಿಲುಕಿ ಆನೆ ನರಳಾಟ
ಹುಣಸೂರು: ನಾಗರಹೊಳೆ ಕಾಡಿನಿಂದ ಹೊರಬಂದು ಗ್ರಾಮಸ್ಥರಿಗೆ ಉಪಟಳ ನೀಡಿದ್ದ ಎರಡು ಆನೆಗಳ ಪೈಕಿ ಒಂದು ಆನೆ ರಾತ್ರಿಯೇ ಕಾಡು ಸೇರಿದ್ದರೆ, ಮತ್ತೊಂದು ಹೆಣ್ಣಾನೆ ಕಂದಕ ದಾಟಲು ವಿಫಲವಾಗಿದೆ. ಈ ಆನೆ ಪುಂಡರ ಕಲ್ಲೇಟು ಹಾಗೂ ಅರಣ್ಯ ಸಿಬ್ಬಂದಿ ಗುಂಡೇಟು ತಿಂದು ತೀವ್ರ ಅಸ್ಪಸ್ಥಗೊಂಡು ಕೆರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ವಲಯದ ಅಂಚಿನಲ್ಲಿರುವ ನಾಗಾಪುರ 3ನೇ ಬ್ಲಾಕ್ನ ಪುನರ್ವಸತಿ ಕೇಂದ್ರದ ಬಳಿಯ ಕೆಂಚನಕಟ್ಟೆಯಲ್ಲಿ ನೀರು ಕುಡಿಯಲು ಈ ಆನೆ ತೆರಳಿತ್ತು. ಅಲ್ಲಿಯೇ ನಿತ್ರಾಣಗೊಂಡು ಕಟ್ಟೆಯೊಳಗೆ ಸಿಲುಕಿಕೊಂಡು ಒದ್ದಾಡುತ್ತಿದೆ. ಇದು ಬದುಕುಳಿಯುವುದೆ ಕಷ್ಟವೆಂಬಂತಾಗಿದ್ದು, ಈ ಆನೆ ನೋಡಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಪಶು ವೈದ್ಯರೂ ಸಿಗದೆ ಚಿಕಿತ್ಸೆಯಿಂದಲೂ ಆನೆ ವಂಚಿತವಾಗಿದೆ.
ಬುಧವಾರ ರಾತ್ರಿ ಕಾಡಿಗಟ್ಟುವ ವೇಳೆ ವಲಯಾರಣ್ಯಾಧಿಕಾರಿ ರಾಜಪ್ಪ ಅವರ ಜೀಪನ್ನು ನಾಗರಹೊಳೆ ರಸ್ತೆಯಲ್ಲೇ ಎತ್ತಿ ಬಿಸಾಡಲು ಆನೆ ಯತ್ನಿಸಿತ್ತು. ಜನರ ಕೂಗಾಟ, ಕಲ್ಲೇಟಿನಿಂದ ಕಾಡಿಗಟ್ಟುವ ವೇಳೆ ಘಾಸಿಗೊಂಡಿದ್ದ ಆನೆ ದಾರಿಯಲ್ಲಿ ಸಿಕ್ಕ ಗೋಪಮ್ಮ ಎಂಬವರಿಗೆ ಸೇರಿದ ಮನೆಯ ಶೀಟನ್ನು ಬೀಳಿಸಿತು. ಶೀಟು ಬಿದ್ದ ರಭಸಕ್ಕೆ ಮೇಕೆ ಮರಿಯೊಂದು ಮೃತಪಟ್ಟಿದೆ. ಮನೆಯೊಳಗೆ ಓಡಿ ಹೋಗಿ ಮನೆ ಮಂದಿ ಪ್ರಾಣ ಉಳಿಸಿಕೊಂಡರು. ಪಕ್ಕದ ಮರದಯ್ಯನಿಗೆ ಸೇರಿದ ಮನೆಯನ್ನೂ ಈ ಆನೆ ಜಖಂಗೊಳಿಸಿದೆ.
ಸಂಜೆವರೆಗೂ ವಲಯ ಅರಣ್ಯಾಧಿಕಾರಿ ಹೊರತಾಗಿ ವೈದ್ಯರನ್ನಾಗಲಿ ಸಾಕಾನೆ ಕರೆ ತಂದು ನೀರೊಳಗೆ ಬಿದ್ದಿರುವ ಆನೆಯನ್ನು ಎತ್ತುವ ಪ್ರಯತ್ನ ನಡೆದಿಲ್ಲ.
ರಾಷ್ಟ್ರೀಯ ಪ್ರತಿಭಾ ಸ್ಪರ್ಧೆಗೆ ಆಯ್ಕೆ
ಹುಣಸೂರು: ಕರ್ನಾಟಕ ಪ್ರತಿಭಾ ಆಕಾಡಮಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಸ್.ಕೆ. ಕೋಡಿಯ ಶ್ರೀಮಂಜುನಾಥ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಾಲೂಕಿನ ಎಸ್.ಕೆ. ಕೋಡಿ ಶ್ರೀಮಂಜುನಾಥ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ 2ನೇ ತರಗತಿಯ ಕೀರ್ತನಾ, 4ನೇ ತರಗತಿಯ ಆರ್. ಆಕಾಶ್, 7ನೇ ತರಗತಿಯ ಜೆ. ಆಕಾಶ್ ಆಯ್ಕೆಯಾಗಿದ್ದಾರೆ.
ಮಹಿಳೆಯರಿಗೆ ತರಬೇತಿ
ಸರಗೂರು: ಹೆಗ್ಗನೂರು ಸಾಕ್ಷರ ಭಾರತ್ ಮತ್ತು ಲೋಕಶಿಕ್ಷಣ ಸಮಿತಿ ವತಿಯಿಂದ ಆಹಾರ ತಯಾರಿಕೆ ತರಬೇತಿ ನೀಡದ ಮಹಿಳೆಯರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮೈಸೂರಿನ ಜೆಎಸ್ಎಸ್ ಸಂಸ್ಥೆಯ ದಾಕ್ಷಾಯಿಣಿ ಒಂದು ತಿಂಗಳು ಆಹಾರ ತಯಾರಿಕೆ ತರಬೇತಿ ನೀಡಿದ್ದರು. ಹೆಗ್ಗನೂರು ಕಾಲೋನಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಮೇಗೌಡ, ಗ್ರಾಪಂ ಕಾರ್ಯದರ್ಶಿ ಕೃಷ್ಣದಾಸ್, ಶಿಕ್ಷಕ ಬಾಲಚಂದ್ರ, ಆನಂದ, ಸುಗುಣ, ಶ್ರೀಕಂಠಶರ್ಮ, ಪ್ರೇರಕ ಸೋಮೇಶ್ ಇದ್ದರು.
ಆರೋಗ್ಯ ಶಿಬಿರ
ಹುಣಸೂರು: ಮೈಸೂರು ಮಕ್ಕಳ ಕೂಟ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಜ.18ರ ಮಧ್ಯಾಹ್ನ 2.30 ರಿಂದ ಸಂಜೆ 6 ರವರೆಗೆ ತಾಲೂಕಿನ ಕೆ.ಎಸ್. ಗದ್ದಿಗೆಯ ಶ್ರೀ ಕೆಂಡಗಣ್ಣೇಶ್ವರ ಮತ್ತು ಶ್ರೀ ಮಹದೇಶ್ವರ ದೇವಾಲಯದ ಆವರಣದಲ್ಲಿ ಆರೋಗ್ಯ ಉಚಿತ ಶಿಬಿರ ಏರ್ಪಡಿಸಿದೆ.