ಶಿಕ್ಷಕರ ಸದನ ನಿರ್ಮಾಣಕ್ಕೆ ನಿವೇಶನ
ಮೈಸೂರು: ತಾಲೂಕು ಮಟ್ಟದ ಶಿಕ್ಷಕರ ಸದನಕ್ಕೆ ಅಗತ್ಯ ನಿವೇಶನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಾಸಭೆಯಲ್ಲಿ ಶಿಕ್ಷಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಶಿಕ್ಷಕ ರಶ್ಮಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶಿಕ್ಷಕರ ಸದನವಿದೆ. ಆದರೆ ಮೈಸೂರು ತಾಲೂಕಿನಲ್ಲಿ ಈ ಭವನ ನಿರ್ಮಿಸಲು ಈವರೆಗೆ ಸಾಧ್ಯವಾಗಿಲ್ಲ. ನಗರಕ್ಕೆ ಹೊಂದಿಕೊಂಡಂತೆ ಯಾವುದಾದರೂ ಸಿಎ ನಿವೇಶನ ಇದ್ದರೆ ಅದನ್ನು ಎಂಡಿಎ ವತಿಯಿಂದ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಶಿಕ್ಷಕರ ವಿವಿಧ ಬೇಡಿಕೆಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆಗುವುದನ್ನು ಬಗೆಹರಿಸುವಲ್ಲಿ ಜಿಪಂ ಅಧ್ಯಕ್ಷರು ಹಾಗೂ ಸದಸ್ಯರು ಸಮಾಲೋಚನೆ ನಡೆಸಬೇಕು ಎಂದು ಸೂಚಿಸಿದದರು.
ಲಂಚ ರಹಿತ ಕ್ಷೇತ್ರ: ಲಂಚ ರಹಿತ ಏಕೈಕ ಕ್ಷೇತ್ರವೆಂದರೆ ಅದು ಶಿಕ್ಷಕರ ವಲಯ. ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣದ ಸಂಬಂಧ ಶಾಲಾಭಿವೃದ್ಧಿ ಸಮಿತಿಯ ಕೆಲವು ಅಧ್ಯಕ್ಷರ ಜತೆ ಸೇರಿ ಮುಖ್ಯಶಿಕ್ಷಕರು ಸಹ ಗುತ್ತಿಗೆದಾರರಿಂದ ಕಮಿಷನ್‌ಗೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಶಿಕ್ಷಕರ ಕ್ಷೇತ್ರ ಕಳಂಕ ರಹಿತವಾಗಿ ಉಳಿಸುವಲ್ಲಿ ಪ್ರಾಮಾಣಿಕತೆ ಮೆರೆಯಬೇಕು ಎಂದರು.
ದೇಶ ಹಾಗೂ ಸಮಾಜ ನಿರ್ಮಾಣ ಮಾಡುವಲ್ಲಿ, ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಪ್ರಾಥಮಿಕ ಶಿಕ್ಷಕರ ಪಾತ್ರ ಬಹುಮುಖ್ಯ. ಎಂದೂ ಮರೆಯದ ಗುರುವಿನ ಸ್ಥಾನದಲ್ಲಿ ಇರುವ ತಾವುಗಳು ಅದರ ಘನತೆಯನ್ನು ಎತ್ತಿ ಹಿಡಿಯಬೇಕು ಎಂದ ಅವರು, ತಾಲೂಕು ಶಿಕ್ಷಕರು ದೂರು ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುವ ಸಂಗತಿ ಎಂದರು.
ಜಿಪಂ ಅಧ್ಯಕ್ಷ ಎಂ.ಮಹದೇವು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಪಟೇಲ್ ಜವರೇಗೌಡ, ಎಂ.ಬಿ. ಸಿದ್ದೇಗೌಡ, ಗೀತಾ ಬಸವಣ್ಣ ಮುಖ್ಯ ಅತಿಥಿಗಳಾಗಿದ್ದರು. ಡಿಡಿಪಿಐ ಎಚ್.ಆರ್. ಬಸಪ್ಪ, ಶಿಕ್ಷಣಾಧಿಕಾರಿ ಡಾ. ಡಿ.ವಿ. ಕಾಂತ, ನೋಡಲ್ ಅಧಿಕಾರಿ ದೇವರಾಜು, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎನ್.ಸಿ. ಉಮೇಶ್ ಇದ್ದರು. ಸಂಘದ ಅಧ್ಯಕ್ಷ ಜಿ.ವಿ.ನಾಗೇಶ್ ಪ್ರಾಸ್ತಾವಿಕ ಮಾತುಗಳಾಡಿದರು. ಪ್ರಧಾನ ಕಾರ್ಯದರ್ಶಿ ಜವರೇಗೌಡ ಸ್ವಾಗತಿಸಿದರು.
ಸಂಘದ ಬೇಡಿಕೆಗಳೇನು?
ಮೈಸೂರು ತಾಲೂಕು ಮಟ್ಟದ ಶಿಕ್ಷಕರ ಸದನ ನಿರ್ಮಿಸಬೇಕು.
ತಾಲೂಕು ವ್ಯಾಪ್ತಿ ಶಿಕ್ಷಕರಿಗೆ ನಗರ ಮನೆ ಬಾಡಿಗೆ ಭತ್ಯೆ ಮಂಜೂರು ಮಾಡಬೇಕು.
ವೈದ್ಯಕೀಯ ವಿಮಾ ಪಾಲಿಸಿ ಜಾರಿಗೊಳಿಸಬೇಕು.
ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಿಂದ ಶಿಕ್ಷಕರನ್ನು ಮುಕ್ತಿಗೊಳಿಸಿ.
150ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ನಾಲ್ಕನೇ ದರ್ಜೆ ನೌಕರರನ್ನು ನೇಮಿಸಿ.
ಶಿಕ್ಷರನ್ನು ಬೇರೆ ಕರ್ತವ್ಯಗಳಿಗೆ ನೇಮಿಸುವುದನ್ನು ನಿಲ್ಲಿಸಬೇಕು.
ಶೌಚಾಲಯ ನಿರ್ವಹಣೆ ಹಾಗೂ ಸ್ವಚ್ಛತೆಗೆ ಪರಿಹಾರ ರೂಪಿಸಬೇಕು.
ಮೈಸೂರು ವಿಭಾಗ ಮಟ್ಟದಲ್ಲಿ ಆಯುಕ್ತರ ಕಾರ್ಯಾಲಯ ಸ್ಥಾಪಿಸಬೇಕು.