ಸಾಲಿಗ್ರಾಮ ಸುತ್ತ ಸಿಲಿಂಡರ್‌ಗೆ ಪರದಾಟ
ಸಾಲಿಗ್ರಾಮ: ಗ್ಯಾಸ್ ಸಿಲಿಂಡರ್‌ಗಳು ಗ್ರಾಹಕರಿಗೆ ಸಕಾಲಕ್ಕೆ ತಲುಪದೇ ಪರದಾಡುತ್ತಿರುವ ಪರಿಸ್ಥಿತಿ ಸಾಲಿಗ್ರಾಮ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಈ ಭಾಗದ ಹಳ್ಳಿಗಳಲ್ಲಿ ಇಂಡೇನ್ ಕಂಪನಿಗೆ ಸೇರಿದ ಸಿಲಿಂಡರ್‌ಗಳ ಸಂಪರ್ಕವನ್ನು ಹೆಚ್ಚಾಗಿ ಪಡೆದಿದ್ದು, ಈ ಭಾಗಕ್ಕೆ ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿರುವ ಶ್ರೀ ರಂಗನಾಥ ಗ್ಯಾಸ್ ಏಜೆನ್ಸಿಯವರು ಸರಬರಾಜು ಮಾಡುತ್ತಿದ್ದಾರೆ. ಆದರೆ ಕಳೆದ 15 ದಿನಕ್ಕೂ ಹೆಚ್ಚಿನ ದಿನಗಳಿಂದ ಸಿಲಿಂಡರ್‌ಗಾಗಿ ಸಾರ್ವಜನಿಕರು ಬುಕ್ಕಿಂಗ್ ಮಾಡಿದರೂ ಇಲ್ಲಿಯವರೆಗೂ ಗ್ರಾಹಕರಿಗೆ ಮಾತ್ರ ಸಿಲಿಂಡರ್‌ಗಳು ಸಿಕ್ಕಿಲ್ಲ.
ಈ ವಿಷಯವಾಗಿ ಏಜೆನ್ಸಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಕಚೇರಿಯಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸುವ ಕಂಪನಿ ಸಿಬ್ಬಂದಿ ಒಬ್ಬೊಬ್ಬರು ಒಂದೊಂದು ರೀತಿಯ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ನಮ್ಮ ಏಜೆನ್ಸಿಗೆ ಸರಿಯಾದ ರೀತಿಯಲ್ಲಿ ಸಿಲಿಂಡರ್‌ಗಳು ಸರಬರಾಜಾಗಿಲ್ಲ ಅವು ಬಂದ ಕೂಡಲೇ ಎಲ್ಲ ಭಾಗಕ್ಕೂ ವಿತರಿಸಲಾಗುವುದು ಹಾಗೂ ಈಗ ನಮ್ಮಲ್ಲಿ ಯಾವುದೇ ಸ್ಟಾಕ್ ಇಲ್ಲವೆಂಬ ಮಾಹಿತಿಯನ್ನು ನಿತ್ಯ ಸಿಲಿಂಡರ್ ಸರಬರಾಜು ಮಾಡುವ ಸಿಬ್ಬಂದಿ ಮಾತಾಗಿದೆ.
ಇದರಿಂದ ಕಳೆದ 15 ದಿನಗಳಿಂದ ಸಿಲಿಂಡರ್‌ಗಳನ್ನು ನಂಬಿ ಕುಳಿತಿರುವ ಮಹಿಳೆಯರು ಗ್ಯಾಸ್ ಏಜೆನ್ಸಿಯವರಿಗೆ ಮತ್ತು ಅವರ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಿರುವುದು ಕಂಡುಬಂದಿದೆ. ಹಬ್ಬ-ಹರಿದಿನಗಳ ವೇಳೆ ಈ ರೀತಿ ಸಿಲಿಂಡರ್‌ಗಳನ್ನು ಕಾಯ್ದಿರಿಸಿದವರಿಗೂ ಸರಿಯಾದ ಸಮಯದಲ್ಲಿ ಸರಬರಾಜು ಮಾಡದೇ ನಾಗರಿಕರನ್ನು ಹಿಂಸಿಸುವ ಇಂತಹ ಕಾರ್ಯವನ್ನು ಕೂಡಲೇ ಏಜೆನ್ಸಿಯವರು ನಿಲ್ಲಿಸಬೇಕು. ಇಂತಹ ಘಟನೆಗಳ ಬಗ್ಗೆ ಹಾಗೂ ನಿತ್ಯ ಏಜೆನ್ಸಿಗಳ ಮೇಲೆ ಮತ್ತು ಅದರ ಕಾರ್ಯವೈಖರಿಯ ಮೇಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತಾಗಬೇಕು ಎಂದು ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
ಈ ರೀತಿಯ ಧೋರಣೆ ನಿಲ್ಲಿಸಿ ಗ್ರಾಹಕರಿಗೆ ಅವಧಿಯೊಳಗೆ ಸಿಲಿಂಡರ್‌ಗಳನ್ನು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಏಜೆನ್ಸಿ ಕಚೇರಿಯ ಮುಂದೆ ಸಾಲಿಗ್ರಾಮ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.