ಹಂತಕಿ ಹೆಂಡತಿ!
ಕ.ಪ್ರ.ವಾರ್ತೆ , ಮೈಸೂರು , ಜ. 16
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದ ಪತ್ನಿ ಸೇರಿದಂತೆ ನಾಲ್ವರನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಹುಣಸೂರು ತಾಲೂಕು ಮೂಕನಹಳ್ಳಿ ಗ್ರಾಮದ ನಕುಲ ಎಂಬಾತನನ್ನು ಕೊಲೆಗೈದಿದ್ದ ಆತನ ಪತ್ನಿ ಜಯಲಕ್ಷ್ಮಿ, ಅದೇ ಗ್ರಾಮದ ಆಕೆಯ ಪ್ರಿಯಕರ ಶಂಕರ (35), ಪಿರಿಯಾಪಟ್ಟಣ ತಾಲೂಕು ದೊಡ್ಡೇಗೌಡನಕೊಪ್ಪಲಿನ ಕಿರಣ (20) ಮತ್ತು ವಡೆಯರಹೊಸಳ್ಳಿಯ ಪಾಲಾಕ್ಷ (22) ಬಂಧಿತ ಆರೋಪಿಗಳು.
ಮೈಲಂಬೂರಿನ ಜಯಲಕ್ಷ್ಮಿಯನ್ನು ಮೂಕನಹಳ್ಳಿಯ ನಕುಲನಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಆರು ವರ್ಷದ ಗಂಡು ಮಗ ಇದ್ದಾನೆ. ನಂತರ ಜಯಲಕ್ಷ್ಮಿಗೆ ಅದೇ ಗ್ರಾಮದ ಶಂಕರ ಎಂಬಾತನೊಂದಿಗೆ ಅನೈತಿಕ ಸಂಬಂಧ ಇತ್ತು. ಈ ವಿಷಯ ತಿಳಿದ ನಕುಲ ಅನುಮಾನಗೊಂಡು ಆಗಾಗ್ಗೆ ಜಗಳವಾಡುತ್ತಿದ್ದ. ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಜಯಲಕ್ಷ್ಮಿ, ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ತವರಿಗೆ ಹೋಗಿ ತನ್ನ ಪ್ರಿಯಕರ ಶಂಕರ್ ಮತ್ತು ಆತನ ಸ್ನೇಹಿತ ಪಾಲಾಕ್ಷ ಮತ್ತು ಸಂಬಂಧಿ ಕಿರಣ್‌ನನ್ನು ಕರೆಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾಗಿಲನ್ನು ಹಾಕಿರಲಿಲ್ಲ: ಡಿ.14ರ ರಾತ್ರಿ ಗಂಡನಿಗೆ ಊಟ ಹಾಕಿ ಬಾಗಿಲು ಹಾಕದೆ ಮಲಗಿದ್ದಳು. ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಮನೆಗೆ ಬಂದ ಶಂಕರ್, ಕಿರಣ ಮತ್ತು ಪಾಲಾಕ್ಷ ಅವರು ದಿಂಬಿನಿಂದ ನಕುಲನ ಉಸಿರುಗಟ್ಟಿಸುವ ಜೊತೆಗೆ ಕುತ್ತಿಗೆಯನ್ನು ಪಂಚೆಯಿಂದ ಬಿಗಿದು ಕೊಲೆ ಮಾಡಿ, ಶವವನ್ನು ಮನೆಮುಂದೆ ಹಾಕಿದ್ದರು. ಮಾರನೆ ದಿನ ಬೆಳಗ್ಗೆ ನೆರಹೊರೆಯವರು ನಕುಲನ ಶವನೋಡಿ ವಿಚಾರಿಸಿದಾಗ ಜಯಲಕ್ಷ್ಮಿಯು ರಾತ್ರಿ ಯಾರೋ ಫೋನ್ ಮಾಡಿ ಕರೆಸಿಕೊಂಡಿದ್ದರು. ಅವರೆ ಕೊಲೆ ಮಾಡಿ ಶವ ತಂದು ಮನೆ ಬಳಿ ಹಾಕಿದ್ದಾರೆ ಎಂದು ತಿಳಿಸಿದ್ದಳು. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿದರು.
ಡಿಎಸ್‌ಪಿ ನಂಜುಂಡ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಗಜೇಂದ್ರಪ್ರಸಾದ್, ಎಸ್‌ಐ ಲವ, ಮಹಿಳಾ ಎಎಸ್‌ಐ ಪದ್ಮಾವತಿ, ಪುಷ್ಪಲತಾ, ಸಿಬ್ಬಂದಿ ಸೈಯದ್ ಕಬ್ಬೀರುದ್ದೀನ್, ಶೇಖರ, ಮೆಹರಾಜ್ ಅಹಮದ್, ಯೋಗೇಶ, ವಿಜಯರಘು, ಕೃಷ್ಣಮೂರ್ತಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.