ಅಲೆಮಾರಿ ಜನಾಂಗದವರಿಗೆ ಮನೆ ನಿರ್ಮಾಣ
ನಂಜನಗೂಡು: ತಾಲೂಕಿನ ಅಂಜನಾಪುರ ಗ್ರಾಮದ ಹಿಂದುಳಿದ ಅಲೆಮಾರಿ ಜನಾಂಗದವರಿಗೆ ರಾಜೀವ್ಗಾಂಧಿ ಹುಡ್ಕೋ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ತಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ತಾಪಂ ಸಮರ್ಥಸೌಧದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕಡು ಬಡವರಾದ ಅಲೆಮಾರಿ ಜನಾಂಗದವರಿಗೆ 1.20 ಲಕ್ಷ ವೆಚ್ಚದ 60 ಮನೆಗಳನ್ನು ಹಾಗೂ ಸಮುದಾಯ ಭವನ ನಿರ್ಮಿಸಲು ರೂಪುರೇಷೆಗಳು ಸಧ್ಯಕ್ಕೆ ನಡೆದಿದ್ದು, ಶೀಘ್ರದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ವಿವರಿಸಿದರು.
ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ರೈತರಿಗೆ ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ರೇಷ್ಮೆ ಇಲಾಖೆಯ 350 ಸಿಬ್ಬಂದಿಯನ್ನು ಕೃಷಿ ಇಲಾಖೆಗೆ ನಿಯೋಜಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಸಹಾಯವಾಗುವ ನಿರೀಕ್ಷೆಯಿದೆ ಎಂದು ಕೃಷಿ ಅಧಿಕಾರಿ ಕುಮಾರಸ್ವಾಮಿ ತಿಳಿಸಿದರು.
ಸರ್ಕಾರದ ಅನುದಾನ ಬಳಸಿಕೊಳ್ಳದೆ ವಾಪಸ್ ಹೋದರೆ ಅಂತಹ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕಾಯ್ದೆಯಿದೆ. ಆದ್ದರಿಂದ ಫೆ.27ರೊಳಗೆ ಎಲ್ಲ ಇಲಾಖೆ ಅಧಿಕಾರಿಗಳು ಅನುದಾನ, ಕಾಮಗಾರಿ ಬಿಲ್ ನೀಡುವಂತೆ ಹೇಳಿದರು. ಫೆ.1ರಿಂದ 10ರವರೆಗೆ ಪಡಿತರ ಸಪ್ತಾಹ ನಡೆಯಲಿದೆ ಎಂದು ಇಒ ಡಾ. ಕೃಷ್ಣಂರಾಜು ಹೇಳಿದರು.
ಡಾ. ಕೃಷ್ಣಂರಾಜು, ಉಪಾಧ್ಯಕ್ಷೆ ಚಿಕ್ಕೀರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ, ಜವರನಾಯ್ಕ, ಅಧಿಕಾರಿಗಳಾದ ಶ್ರೀನಿವಾಸ್, ಪರುಷೋತ್ತಮ್, ಪ್ರದೀಪ್, ಮಹೇಶ್ ಇದ್ದರು.