ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಅವಶ್ಯ: ಸುಧನ್ವ
ಮೈಸೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಪ್ರಾಯೋಗಿಕ ಕಲಿಕೆ ಅವಶ್ಯಕ ಎಂದು ಎಕ್ಸಲ್ ಸಾಫ್ಟ್ ಟೆಕ್ನಾಲಜಿಸ್ ವ್ಯವಸ್ಥಾಪಕ ನಿರ್ದೇಶಕ ಡಿ. ಸುಧನ್ವ ಹೇಳಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಎಂ.ವಿ. ಸಭಾಂಗಣದಲ್ಲಿ ಶುಕ್ರವಾರ ಸೆಂಟರ್ ಫಾರ್ ಟ್ರೈನಿಂಗ್ ಇನ್ ಅಡ್ವಾನಸ್ಡ್ ಟೆಕ್ನಾಲಜಿಸ್ (ಸಿಟಿಎಟಿ) ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳ ಸಂಪರ್ಕ ಹೊಂದುವುದು ಎಂಜಿನಿಯರಿಗಳ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ. ಆದ್ದರಿಂದ ಇಂತಹ ತರಬೇತಿಯಿಂದ ಹೆಚ್ಚಿನ ನಿರಂತರ ಕಲಿಕೆಯು ಸಾಧ್ಯವಾಗಲಿದೆ ಎಂದರು.
ಪ್ರಾಸ್ತಾವಿಕ ಮಾತುಗಳಾಡಿದ ಸಂಸ್ಥೆ ನಿರ್ದೇಶಕ ಸುಧೀರ್ ಸೊಸ್ಲೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಂದ ಉಪಯೋಗವಾಗುತ್ತಿಲ್ಲ ಎಂಬುವ ಮಾತುಗಳು ಸರಿಯಲ್ಲ. ಅಲ್ಲದೆ ಇದ್ಕಕೆ ಪೂರಕವಾದ ತರಬೇತಿಗೆ ಬೆಂಗಳೂರು ಮತ್ತಿತರ ಮಹಾನಗರಗಳಿಗೆ ತೆರಳಿ ಹೆಚ್ಚಿನ ಹಣ ಹಾಗೂ ಸಮಯ ವ್ಯಯ ಮಾಡಬೇಕಿದೆ. ಇದನ್ನು ತಪ್ಪಿಸುವ ಸಲುವಾಗಿ ಮೈಸೂರಿನಲ್ಲಿ ಈ ತರಬೇತಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ಎನ್ಐಇ ಸಂಸ್ಥೆ ಕೋಶಾಧ್ಯಕ್ಷ ಎಸ್.ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ಜಿ.ಎಲ್. ಶೇಖರ್, ಮ್ಯಾಕಾನಿಕಲ್ ವಿಭಾಗದ ಮುಖ್ಯಸ್ಥ ರಾಘವೇಂದ್ರ ಇದ್ದರು.