ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಿನೇ ದಿನೇ ಕಳೆಗಟ್ಟುತ್ತಿರುವ ಬಹುರೂಪಿ

Vishwanath S
Updated On : 18 Jan 2014, 1:56 am

ಮೈಸೂರು: ಜನ ಮರುಳೋ, ಜಾತ್ರೆ ಮರುಳೋ ಎಂಬ ಮಾತನ್ನು ಕೇಳಿದ್ದೀರಿ. ಅದಕ್ಕೆ ಹೊಂದುವಂತೆ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ದಿನ ಕಳೆದಂತೆ ಕಳೆಗಟ್ಟುತ್ತಿದೆ.
ಮೈಸೂರಿನ ಜನ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಅದೆಲ್ಲವನ್ನು ಮುಂಚಿತವಾಗಿ ಮುಗಿಸಿ, ರಂಗಾಯಣದತ್ತ ಎಡತಾಕುತ್ತಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ರಂಗ ಸಂಭ್ರಮವನ್ನು ಕಾಯಾ, ಮನಸಾ, ವಾಚಾ ತುಂಬಿಕೊಳ್ಳಲು ಕಾತುರರಾಗಿ ಬರುತ್ತಿದ್ದಾರೆ. ರಂಗಯಾನದ ದಿಬ್ಬಣದಲ್ಲಿ ಸಾಗಿ ಬರುವ ಹೊಸತನ ಕಣ್ತುಂಬಿಕೊಳ್ಳಲು ಬರುತ್ತಿರುವುದನ್ನು ನೋಡಿದರೆ ಇದು ಜಾತ್ರೆಯೇ ಇರಬೇಕು ಎಂದನಿಸುವುದರಲ್ಲಿ ಅನುಮಾನವಿಲ್ಲ. ಶುಕ್ರವಾರದಂದು ನಡೆದ ಎಲ್ಲ ಕಾರ್ಯಕ್ರಮಗಳು ಜನದಟ್ಟಣೆಯಿಂದ ಕಂಗೊಳಿಸುತ್ತಿದ್ದವು. ನಾಡಿನಾದ್ಯಂತ ಬಹುಪ್ರಸಿದ್ಧಿ ಗಳಿಸಿರುವ ಬೆಂಗಳೂರಿನ ನಟರಂಗ ತಂಡ ಅಭಿನಯಿಸುವ ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಕ್ಕಂತೂ ಜನ ಕಿಕ್ಕಿರಿದು ತುಂಬಿದ್ದರು. ಮಧ್ಯಾಹ್ನ 3.30 ಹಾಗೂ ಸಂಜೆ 6.30ಕ್ಕೆ ಎರಡು ಪ್ರದರ್ಶನ ಕಂಡ ನಾಟಕಕ್ಕೆ ಒಂದು ತಾಸು ಮುಂಚಿತವಾಗಿ ಸರತಿಯಲ್ಲಿ ನಿಂತು, ಆಸನ ಆಕ್ರಮಿಸಿಕೊಂಡು ನಾಜೂಕಯ್ಯನ ಅಮೋಘ ನಟನೆ ಆಸ್ವಾದಿಸಿದರು.
ಕಿರುತೆರೆಯ ಖ್ಯಾತ ನಿರ್ದೇಶಕ, ವಕೀಲ ಟಿ.ಎನ್. ಸೀತಾರಾಂ ರಚನೆಯ, ಆರ್. ನಾಗೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ನಮ್ಮೊಳಗೊಬ್ಬ ನಾಜೂಕಯ್ಯ ನಾಟಕದಲ್ಲಿನ ಪಾತ್ರ ಅನುಭವಿ ಕಲಾವಿದರು. ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಇವರು ಬಹುರೂಪಿಯಲ್ಲಿ ಅಮೋಘವಾಗಿ ಅಭಿಯನ ತೋರಿ ಇಲ್ಲಿನ ಪ್ರೇಕ್ಷಕ ವರ್ಗದಿಂದ ಶಹಬ್ಬಾಸ್‌ಗಿರಿ ಪಡೆದುಕೊಂಡರು.
ಒಂದೇ ಕುಟುಂಬದ ನಾಟಕದ ಗೀಳು: ಆಂಧ್ರಪ್ರದೇಶದಲ್ಲಿ ಬಹುಪ್ರಸಿದ್ಧಿ ಪಡೆದು ನೂರಾರು ಪ್ರದರ್ಶನ ಕಂಡಿರುವ ಜೈ ಪಾತಾಳ ಭೈರವಿ ನಾಟಕಕ್ಕೆ ವನರಂಗದ ತುಂಬೆಲ್ಲ ಜನ ಬೀಡುಬಿಟ್ಟಿದ್ದರು. ಆಶ್ಚರ್ಯವೆಂದರೆ ಈ ನಾಟಕ ಅಭಿನಯಿಸುವ ಕಲಾವಿದರೂ ಸಹ ಬೀಡು ಬಿಟ್ಟಿದ್ದರು. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಮಿಡಿ ಪೇಟ ಗ್ರಾಮದ ಶ್ರೀ ವೆಂಕಟೇಶ್ವರ ನಾಟ್ಯ ಮಂಡಳಿ (ಸುರಭಿ)ಯಲ್ಲಿರುವ ಕಲಾವಿದರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು. ಮಾಲೀಕ ರೇಕಂದರ್ ನಾಗೇಶ್ವರರಾವ್ ನೇತೃತ್ವದಲ್ಲಿ ದೂರದಿಂದ ಮೈಸೂರಿಗೆ ಬಂದಿರುವ ಇಡೀ ತಂಡ ಬಿ.ವಿ. ಕಾರಂತರ ಬೆಳೆಸಿದ ಜಾಗದಲ್ಲಿ ಅಭಿನಯಿಸಲು ಉತ್ಸುಕರಾಗಿದ್ದರು. 1996 ರಲ್ಲಿ ಬಿ.ವಿ. ಕಾರಂತ ಅರು ಇವರೊಟ್ಟಿಗೆ ಸೇರಿ ಭೀಷ್ಮ ನಾಟಕ ನಿರ್ದೇಶಿಸಿದ್ದರು. ಅವರ ಕೃತಜ್ಞತೆ ತೀರಿಸಲು ಇಡೀ ಪರಿವಾರ ಸಮೇತ ಆಗಮಿಸಿದ್ದರು. ಇವರು ಜೈ ಪಾತಾಳ ಭೈರವಿಯನ್ನು ಸಾದರಪಡಿಸಿದರು.   
ರಂಗಗೀತೆ ಕಾರ್ಯಕ್ರಮ ಫೇಮಸ್ಸು: ಕಿಂದರ ಜೋಗಿ ಆವರಣದಲ್ಲಿ ನಡೆದ ರಂಗಗೀತೆ ಕಾರ್ಯಕ್ರಮಕ್ಕೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಿರಿಯ ರಂಗತಜ್ಞ ಕಿರಗಸೂರು ರಾಜಪ್ಪ, ಕುಪ್ಯ ವೆಂಕಟರಾಮ್ ತಂಡದವರು ನಡೆಸಿಕೊಟ್ಟ ಈ ಕಾರ್ಯಕ್ರಮಕ್ಕೆ ನಮ್ಮವರೊಂದಿಗೆ ವಿದೇಶಿಗರು ತಲೆದೂಗಿದರು. ಪೌರಾಣಿಕ ನಾಟಕಗಳ ಪ್ರಸಿದ್ಧ ಗೀತೆಗಳನ್ನು ಪ್ರಸ್ತುತಪಡಿಸಿದ ರಾಜಪ್ಪ ಅವರ ಕಂಠದ ಗಮ್ಮತ್ತು ಕೇಳಿದವರಿಗೆ ಗೊತ್ತು ಶ್ರೀಕೃಷ್ಣಲೀಲೆ, ಸಂಪೂರ್ಣ ರಾಮಾಯಣ, ಭಕ್ತ ಅಂಬರೀಷ ನಾಟಕಗಳ ಹಾಡುಗಳನ್ನು ನಿಗದಿತ ಅವಧಿಯೊಳಗೆ ಹಾಡಿ ಚಪ್ಪಾಳೆ ಗಿಟ್ಟಿಸಿದರು. ಇವರ ಕಾರ್ಯಕ್ರಮ ನಂತರ ಒರಿಸ್ಸಾದ ಜಾನಪದ ಕಲೆಗಳಲ್ಲಿ ಒಂದಾದ ಗೋಟಿಪುವಾ ನೃತ್ಯ ಪ್ರೇಕ್ಷವರ್ಗದ ಮನ ಗೆದ್ದಿತು.
ನೀರವ ಮೌನದಂತೆ ಸಾಗಿದ ಚಿತ್ರೋತ್ಸವ
ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿರುವ ಬಹುರೂಪಿ ಚಿತ್ರೋತ್ಸವಕ್ಕೂ ಕೂಡ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಕ್ಕದಾದ ಕೊಠಡಿಯಲ್ಲಿ ಆಸಕ್ತ ವರ್ಗ ಕುಳಿತು ಎಲ್ಲ ಭಾಷೆ ಚಿತ್ರಗಳನ್ನು ವೀಕ್ಷಿಸಿದರು. 56 ನಿಮಿಷದ ಹಿಂದಿಯ ಕೋಯಿ ಸುನ್ತಾ ಹೈ, 108 ನಿಮಿಷದ ಇಂಗ್ಲಿಷ್‌ನ ಅಮಂದ್ಲಾ-ಎ ರೆವಲೂಷನ್ ಇನ್ ಹಾರ್ಮೋನಿ, 102 ನಿಮಿಷದ ಜರ್ಮನ್‌ನ ಸಂಸಾರ ಚಿತ್ರಗಳು ಮನಸೂರೆಗೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement