ನಾಲೆಗಳಿಗೆ ನೀರು ಹರಿಸಿ
ಕ.ಪ್ರ.ವಾರ್ತೆ , ಟಿ.ನರಸೀಪುರ , ಜ. 17
ತುರಗನೂರು ಶಾಖೆಯ ಹಲವಾರ ಹಾಗೂ ಬೊಪ್ಪೇಗೌಡನ ಪುರ ನಾಲೆಗಳಿಗೆ ಸಕಾಲದಲ್ಲಿ ಸರ್ಕಾರ ನೀರು ಹರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಮುಡಕನಪುರ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಡುಕನಪುರ ಗ್ರಾಮದಲ್ಲಿ ಬೊಪ್ಪೇಗೌಡನ ಪುರ ಮತ್ತು ಹಲವಾರ ನಾಲಾ ಹಿತರಕ್ಷಣಾ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ ರೈತರ ಕಷ್ಟದ ಬದುಕು ಸರಿದಾರಿಗೆ ಬರುತ್ತಿಲ್ಲ. ಸಾವಿರಾರು ರೈತರ ಕೃಷಿ ಭೂಮಿಗೆ ನೀರುಣಿಸಲು ಎರಡೂ ನಾಲೆಗಳಿಗೂ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸವಲತ್ತುಗಳು ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ. ಉತ್ಪಾದನಾ ವೆಚ್ಚ ಅಧಿಕವಾಗಿ, ಇಳುವರಿಯಿಂದ ಪಡೆಯುವ ಆದಾಯ ಕ್ಷೀಣಿಸಿದಾಗ ಕುಗ್ಗಿ ಹೋಗುವ ರೈತ ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತಾರೆ. ಕೃಷಿ ನಷ್ಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಬೇಡಿಕೆಗನುಗುಣವಾಗಿ ಬೆಳೆ ಬೆಳೆದು ಅಧಿಕ ಲಾಭ ಗಳಿಸಬೇಕೆಂದು ಷಡಕ್ಷರಿ ಶ್ರೀಗಳು ಕರೆ ನೀಡಿದರು.
ಸಂಘಟನೆಯಲ್ಲಿ ಬಲ: ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸು ಮಾತನಾಡಿ, ಸಂಘಟನೆಯಲ್ಲಿ ಬಲವಿದೆ ಎಂಬುದನ್ನು ರೈತರು ಅರಿತುಕೊಳ್ಳಬೇಕು. ಒಗ್ಗೂಡಿದರೆ ಸರ್ಕಾರವನ್ನು ತಾವಿರುವಲ್ಲಿಗೆ ಬರುವಂತೆ ಮಾಡಬಹುದು. ಹೋರಾಟದ ಮೂಲಕವೇ ಏನನ್ನಾದರೂ ಸಾಧಿಸಬಹುದು ಎಂಬ ಕಿವಿಮಾತು ಹೇಳಿದರು.
ಬಿ.ಜಿ ಪುರ ಮತ್ತು ಹಲವಾರ ನಾಲಾ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಬೊಪ್ಪೇಗೌಡನಪುರ ಶ್ರೀ ಮಂಟೇಸ್ವಾಮಿ ಮಠದ ಪ್ರಭುದೇವರಾಜೇ ಅರಸು ಮಾತನಾಡಿ, ರೈತರು ನಡೆಸುವ ಎಲ್ಲ ಹೋರಾಟಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ರೈತ ನಾಯಕ ಪ್ರೊ.ಕೆ.ಸಿ. ಬಸವರಾಜು ಅವರು ರೈತ ಚಳುವಳಿಗಳ ಬಗ್ಗೆ ತಿಳಿಸಿಕೊಟ್ಟರು.
ಅಶ್ವಥ್ನಾರಾಯಣ ಅರಸು, ಹಿತರಕ್ಷಣಾ ಸಮಿತಿ ಅಧ್ಯಕ್ಷ ದೊಡ್ಡಬೂವಳ್ಳಿ ನಟರಾಜು, ಕಾರ್ಯದರ್ಶಿ ವಸಂತ, ರೈತ ಮುಖಂಡರಾದ ಬಸವರಾಜೇ ಅರಸು, ಕುಂದೂರುಮೂರ್ತಿ, ಪಾಪಣ್ಣ, ಸಾಲೂರು ಸ್ವಾಮಿ, ಚಿದರವಳ್ಳಿ ನಾಗೇಂದ್ರ, ಮಹದೇವು, ಶಿಕ್ಷಕ ನಾಗೇಶ, ತಾಪಂ ಮಾಜಿ ಅಧ್ಯಕ್ಷ ಎಂ.ಕುಮಾರಸ್ವಾಮಿ ಸೇರಿದಂತೆ ಬಿ.ಜಿ ಪುರ ಮತ್ತು ಹಲವಾರ ನಾಲಾ ವ್ಯಾಪ್ತಿಯ ಗ್ರಾಮಗಳ ರೈತರು ಭಾಗವಹಿಸಿದ್ದರು.