ವ್ಯವಸ್ಥೆ ಬದಲಾವಣೆಗೆ ನಾಗರಿಕ ಸೇವೆ ಪೂರಕ
ಮೈಸೂರು: ನಾಗರಿಕ ಸೇವೆಯಿಂದ ವ್ಯವಸ್ಥೆ ಬದಲಾವಣೆ ಸಾಧ್ಯ ಎಂದು ಗೃಹ ರಕ್ಷಕ ಹಾಗೂ ಅಗ್ನಿಶಾಮಕ ದಳದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 2014ರ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ 10 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕು, ಹೆಚ್ಚು ಹಣ ಗಳಿಕೆ ಮಾಡಬೇಕೆಂಬ ಉದ್ದೇಶವನ್ನು ಮಾತ್ರ ಅಭ್ಯರ್ಥಿಗಳು ಹೊಂದಿದರೆ ಅದು ಸಾರ್ಥಕವಾಗುವುದಿಲ್ಲ. ಸಮಾಜದ ಪರಿವರ್ತನೆ ಹಾಗೂ ವ್ಯವಸ್ಥೆ ಬದಲಾವಣೆಗೆ ಮುಂದಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ನಾಗರಿಕ ಸೇವೆಯಿಂದ ವ್ಯವಸ್ಥೆ ಬದಲಾವಣೆ ಸಾಧ್ಯವಿದೆ ಎಂದರು.
ವೈದ್ಯರು, ಎಂಜಿನಿಯರಗಳು, ವಕೀಲರು ಈ ಮುಂತಾದ ವೃತ್ತಿಗಳಂತೆ ಹಾಗೂ ಖಾಸಗಿ ಕ್ಷೇತ್ರದ ವಾಣಿಜ್ಯೋದ್ಯಮಿಗಳಂತೆ ಕೇವಲ ಆದಾಯವನ್ನೋ, ಸಂಬಳವನ್ನೋ, ಬಡ್ತಿಯನ್ನೋ ನಿರೀಕ್ಷಿಸುವುದು ಸರಿಯಾದ ಕ್ರಮವಲ್ಲ. ಸಮಾಜಕ್ಕೆ ಏನನ್ನಾದರೂ ಕೊಡುವ ಹಾಗೂ ದೇಶ ನಿರ್ಮಾಣಕ್ಕೆ ಕೈ ಜೋಡಿಸುವಲ್ಲಿ ತಮ್ಮ ಕೊಡುಗೆಗಳನ್ನು ನೀಡಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಕೇವಲ ಅದೃಷ್ಟವನ್ನು ನೆಚ್ಚಿಕೊಂಡರೆ ಸಾಲದು. ಸತತ ಪರಿಶ್ರಮ ವಹಿಸಿ ಪರೀಕ್ಷೆ ಎದುರಿಸಿದಾಗ ಮಾತ್ರ ಯಶಸ್ಸು ಕಾಣಬಹುದು. ಉದ್ಯೋಗ ಯಾರು ಬೇಕಾದರೂ ಪಡೆಯಬಹುದು. ಆದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮೊದಲು ವ್ಯಕ್ತಿತ್ವ ರೂಪಿಸಿಕೊಂಡು ಮುನ್ನಡೆಯುವಲ್ಲಿ ಆಸಕ್ತಿ ವಹಿಸಿಬೇಕು ಎಂದರು.
ಪರೀಕ್ಷಾ ವಿನ್ಯಾಸ ಬದಲು: ಪ್ರಸುತ್ತ ಸ್ಪರ್ಧಾತ್ಮಕ ಪರೀಕ್ಷೆಯ ವಿನ್ಯಾಸ ಬದಲಾಗಿದ್ದು, ಇದಕ್ಕೆ ಪೂರಕವಾಗಿ ಪೂರ್ವಸಿದ್ಧತೆ ವಹಿಸಬೇಕು. ಒಂದು ವಿಷಯ ವ್ಯಾಸಂಗಕ್ಕೆ ನಾಲ್ಕಾರು ಪುಸ್ತಕಗಳ ಅಧ್ಯಯನ ಅವಶ್ಯಕ. ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿದ್ಯಮಾನಗಳ ಅರಿವು ಬಹುಮುಖ್ಯ. ಇದಕ್ಕಾಗಿ ವೃತ್ತ ಪತ್ರಿಕೆಗಳನ್ನು ಹೆಚ್ಚಾಗಿ ಓದಬೇಕು. ಎಲ್ಲಾ ಕ್ಷೇತ್ರಗಳ ಮಾಹಿತಿ ಮತ್ತು ವಿಷಯಗಳ ಜ್ಞಾನ ಹೊಂದಿದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸುವ ಕನಸು ಸಾಕಾರಗೊಳ್ಳಲಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್, ಬಡತನದ ನಡುವೆಯೂ ಅನೇಕ ಮಂದಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಪರಿಶ್ರಮ ವಹಿಸಿ ತೇರ್ಗಡೆಯಾಗಿ ಉನ್ನತ ಹುದ್ದೆಗಳನ್ನು ಗಳಿಸಿರುವುದು ಮಾದರಿ ಎಂದು ಉದಾಹರಣೆ ಸಹಿತ ವಿವರಿಸಿ, ಈ ದಿಸೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ಸವಲತ್ತುಗಳನ್ನು ವಿವಿ ಕಲ್ಪಿಸಲಿದೆ ಎಂದರು.
ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸೆಲ್ವಪಿಳ್ಳೈ ಅಯ್ಯಂಗಾರ್ ನಿರೂಪಿಸಿದರು. ನಂತರ ನಡೆದ ಉಪನ್ಯಾಸದಲ್ಲಿ ತಜ್ಞರು ವಿಷಯ ಕುರಿತು ಮಾತನಾಡಿದರು.