ಹೈನುಗಾರಿಕೆ ಅಭಿವೃದ್ಧಿಗೆ ಕ್ರಮ: ವೆಂಕಟೇಶ್
ಪಿರಿಯಾಪಟ್ಟಣ: ರೈತರ ಉಪ ಕಸುಬಾಗಿರುವ ಹೈನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಒಕ್ಕೂಟದೊಂದಿಗೆ ಹೆಚ್ಚಿನ ಸವಲತ್ತು ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವುದಾಗಿ ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಗೊರಳ್ಳಿ ಗ್ರಾಮದಲ್ಲಿ 15 ಲಕ್ಷ ವೆಚ್ಚದ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೈನುಗಾರಿಕೆ ಕ್ಷೇತ್ರ ವಿಸ್ತಾರಗೊಳ್ಳುತ್ತಿದ್ದು, ಹಾಲು ಉತ್ಪಾದನೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಕೆಲವು ಗ್ರಾಮಗಳ ರೈತರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದಾರೆ ಎಂದರು.
ನಂತರ ತಾಲೂಕಿನ ಕೆ.ಬಸವನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು, ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ 15 ಲಕ್ಷ ವೆಚ್ಚದ ಬಿಎಂಸಿ ಕೇಂದ್ರ, ಚಿಕ್ಕಹೊಸೂರು ಗ್ರಾಮದಲ್ಲಿ 15 ಲಕ್ಷ ವೆಚ್ಚದ ಬಿಎಂಸಿ ಕೇಂದ್ರ, ಚಿಕ್ಕಹೊಸೂರು ಹಾಗೂ ಹಂದಿಗುಡ್ಡ ಕಾವಲಿನಲ್ಲಿ ತಲಾ 10.95 ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಒಕ್ಕೂಟದ ಜಿಲ್ಲಾ ನಿರ್ದೇಶಕ ಟಿ.ಎ. ರಾಜೇಗೌಡ ಮಾತನಾಡಿದರು. ತಾಪಂ ಸದಸ್ಯೆ ಬಿ.ವಿ. ಅನಿತಾ, ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಮಹದೇವಪ್ಪ, ಗೊರಳ್ಳಿ ಒಕ್ಕೂಟದ ಅಧ್ಯಕ್ಷ ಸೋಮೇಗೌಡ, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್‌ಬಾಬು, ಉಪ ವ್ಯವಸ್ಥಾಪಕ ಸಣ್ಣತಮ್ಮೇಗೌಡ, ಗೋವಿಂದರಾಜು, ಜಿಲ್ಲಾ ಒಕ್ಕೂಟದ ನಿರ್ದೇಶಕಿ ವಿಜಯಲಕ್ಷ್ಮಿ, ವಿಸ್ತರಣಾಧಿಕಾರಿ ಕಾಳೇಗೌಡ, ಭೀಮ, ಕುಂಜಣ್ಣ ಕಾರ್ನಾಡ್, ಇ. ಗಣೇಶಚಾರಿ ಇದ್ದರು.