ಕಾಯ್ದೆ ಉಲ್ಲಂಘನೆಗೆ ಕಡಿವಾಣ ಅವಶ್ಯಕ
ಕ.ಪ್ರ.ವಾರ್ತೆ , ಮೈಸೂರು , ಜ. 18
ನಗರ ಯೋಜನೆಯ ಅನುಷ್ಠಾನದಲ್ಲಿ ನಡೆದಿರುವ ಕಾಯ್ದೆ ಹಾಗೂ ನಿಯಮ ಉಲ್ಲಂಘನೆಗೆ ಕಡಿವಾಣ ಅವಶ್ಯಕ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಚಾರಿ ಹೇಳಿದರು.
ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಪಟ್ಟಣ ಮತ್ತು ರಾಷ್ಟ್ರ ಯೋಜನಾ ಸಂಘ ಹಾಗೂ ಮೈಸೂರು ವಿವಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಯುಡಿಪಿಎಫ್ಐ ಮಾರ್ಗದರ್ಶನದಲ್ಲಿ ಏರ್ಪಡಿಸಿದ್ದ ನಗರಾಭಿವೃದ್ಧಿ ಯೋಜನೆ ಪ್ರತಿಪಾದನೆ ಹಾಗೂ ಕಾರ್ಯಗತಗೊಳಿಸುವಿಕೆಯ ಪುನರ್ವಿಮರ್ಶೆ ಎಂಬ ವಿಷಯ ಕುರಿತ 2ನೇ ಪ್ರಾದೇಶಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನಾಬದ್ಧ ನಗರಗಳ ನಿರ್ಮಾಣಕ್ಕಾಗಿ ಕಂದಾಯ ಕಾಯ್ದೆ ಜಾರಿಗೊಳಿಸಿದ್ದರೂ ಆ ನಿಯಮವನ್ನು ಉಲ್ಲಂಘಿಸುವ ಕೆಲಸ ಹೆಚ್ಚಾಗಿ ನಡೆದಿದೆ. ಶೇ.100ರಲ್ಲಿ ಶೇ. 1- 2ರಷ್ಟು ಮಾತ್ರ ನಿಯಮ ವಿರುದ್ಧವಾಗಿದ್ದರೆ ಒಂದು ವೇಳೆ ವಿಚಾರ ಮಾಡಬಹುದು. ಆದರೆ ಇತ್ತೀಚೆಗೆ ಶೇ.60ರಷ್ಟು ನಿಯಮ ಉಲ್ಲಂಘಿಸುತ್ತಿರುವುದಕ್ಕೆ ಯಾರ್ಯಾರು ಹೊಣೆಗಾರರು ಎಂದು ಚಿಂತಿಸಬೇಕು. ಕಾಯ್ದೆ ಹಾಗೂ ನಿಯಮವನ್ನು ಪಾಲಿಸುವಲ್ಲಿ ಉದಾಸೀನತೆ ಕಂಡುಬಂದಿದೆ ಎಂದರು.
ಕೇವಲ ಮಾಸ್ಟರ್ ಪ್ಲಾನ್ಗಳು ಯಾಂತ್ರಿಕವಾದುದು. ಆಡಳಿತಗಾರರು ಯೋಜನಾಕಾರರ ಮಾರ್ಗದರ್ಶನ ಪಡೆದು ಉತ್ತಮ ನಗರ ರೂಪಿಸಬೇಕು. ಆದರೆ ಅನೇಕ ನಗರಗಳು ಯೋಜನೆ ರಹಿತವಾಗಿ ರೂಪಿತವಾಗಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮೂಲಸೌಕರ್ಯ ಮತ್ತಿತರ ಅನುಕೂಲ ಕಲ್ಪಿಸಲು ತೊಂದರೆ ಪಡಬೇಕಿದೆ ಎಂದರು.
ಕಾಯ್ದೆ ಬದಲಾವಣೆ ಅವಶ್ಯ: ಭೂ ಪರಿವರ್ತನಾ ಕಾಯ್ದೆಯೂ ಉಲ್ಲಂಘನೆಗೆ ಹೊರತಾಗಿಲ್ಲ. ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸುವುದನ್ನು ಕಾಣಬಹುದು. ಈ ಹಿಂದೆ ಆಹಾರ ಭದ್ರತೆ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೃಷಿ ಭೂಮಿಯನ್ನು ಉಳಿಸುವ ದಿಸೆಯಲ್ಲಿ ಕಾಯ್ದೆ ತರಲಾಯಿತು. ಆದರೆ ಇಂದಿಗೂ ಆ ಕಾಯ್ದೆಯನ್ನು ಹಾಗೇ ಉಳಿಸಿಕೊಂಡು ಬರಲಾಗಿದೆ. ಅಭಿವೃದ್ಧಿಗೆ ಪೂರಕವಾಗಿ ಆ ಕಾಯ್ದೆ ಬದಲಾಗಬೇಕು. ಇಂತಹ ವಿಚಾರಗಳಿಗೆ ಪುನರ್ವಿಮರ್ಶೆ ನಡೆಸಿ, ತಜ್ಞರು ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಭಾರತ ಪಟ್ಟಣ ಯೋಜನಾಕಾರರ ಸಂಸ್ಥೆ ಅಧ್ಯಕ್ಷ ಎ.ಎನ್.ಸಚ್ಚಿದಾನಂದನ್, ದೇಶದಲ್ಲಿ ಸುಮಾರು 9 ಸಾವಿರ ಬೃಹತ್ ಪಟ್ಟಣಗಳಿದ್ದು ಇದರಲ್ಲಿ 8 ಸಾವಿರ ಪಟ್ಟಣಗಳು ಸರಿಯಾದ ಯೋಜನೆಯಲ್ಲಿ ನಿರ್ಮಾಣವಾಗಿಲ್ಲ. ದೂರದೃಷ್ಟಿಯ ಪರಿಕಲ್ಪನೆಯಿಂದ ಉತ್ತಮ ನಗರವನ್ನು ನಿರ್ಮಾಣ ಮಾಡಿ ಪೀಳಿಗೆಯಿಂದ ಪೀಳಿಗೆಗೆ ಉಳಿಸಿಕೊಡುವ ಕೆಲಸವನ್ನು ಯೋಜನಾಬದ್ಧವಾಗಿ ಮಾಡಬೇಕಿದೆ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಭಾರತ ಪಟ್ಟಣ ಯೋಜನಾಕಾರರ ಸಂಸ್ಥೆ ಮುಖ್ಯ ಯೋಜನಾಕಾರ ಜೆ.ಬಿ.ಕ್ಷೀರಸಾಗರ್, ಕರ್ನಾಟಕ ಸರ್ಕಾರ ಪಟ್ಟಣ ಮತ್ತು ರಾಷ್ಟ್ರ ಯೋಜನೆ ನಿರ್ದೇಶನಾಲಯದ ಪ್ರಭಾರ ನಿರ್ದೇಶಕ ಎಸ್.ಬಿ.ಹೊನ್ನೂರು ಮುಖ್ಯ ಅತಿಥಿಯಾಗಿದ್ದರು.
ಅಭಿವೃದ್ಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಕೃಷ್ಣೇಗೌಡ ಸ್ವಾಗತಿಸಿದರು. ಪ್ರಸಾರಾಂಗದ ನಿರ್ದೇಶಕ ಪ್ರೊ. ಸಿ. ನಾಗಣ್ಣ ನಿರೂಪಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಟಿಸಿಪಿಒ ಆರ್.ಶ್ರೀನಿವಾಸ್ ವಂದಿಸಿದರು.