ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಡುಕುತೊರೆ ಸಮಗ್ರಅಭಿವೃದ್ಧಿಗೆ 3 ಕೋಟಿ

Vishwanath S
Updated On : 19 Jan 2014, 1:18 am

ಟಿ. ನರಸೀಪುರ: ಮುಡುಕುತೊರೆಯ ಸಮಗ್ರ ಅಭಿವೃದ್ಧಿಗೆ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವದ ಯೋಜನೆಯಲ್ಲಿ ಮೂರು ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಮುಡುಕುತೊರೆ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಮಂಜೂರಾದ 3 ಕೋಟಿಯಲ್ಲಿ 1 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಎರಡು ಕೋಟಿ ರು. ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸದ್ಯದಲ್ಲಿಯೇ ಒದಗಿಸಲಾಗುವುದು ಎಂದರು.
ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ಮುಡುಕುತೊರೆ ವೃತ್ತವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ತಿಗೊಳಿಸಿ, ಅಭಿವೃದ್ಧಿ ಪಡಿಸುವ ಬಗ್ಗೆ ಯೋಜನೆ ರೂಪಿಸಬೇಕು. ಮುಜರಾಯಿ ಹಾಗೂ ಆರೋಗ್ಯ ಇಲಾಖೆ ಸ್ವಚ್:್ತೆಯ ನಿರ್ವಹಣೆ ಮಾಡಬೇಕು. ವಿದ್ಯುತ್ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಕೃಷಿ, ರೇಷ್ಮೇ, ಮೀನುಗಾರಿಕೆ, ಶಿಕ್ಷಣ ಹಾಗೂ ತೋಟಗಾರಿಕೆ ಇಲಾಖೆಗಳ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತ ಪ್ರದರ್ಶನವನ್ನು ಏರ್ಪಡಿಸುವಂತೆ ಸೂಚನೆ ನೀಡಿದರು.  ಮುಡುಕುತೊರೆ ಸಮೂಹ ದೇವಾಲಯಗಳ ಸಿಇಓ ರಾಜಶೇಖರ್ ಮಾತನಾಡಿ, ಮಾಧವಮಂತ್ರಿ ಅಣೆಕಟ್ಟೆ ಒಡೆದ ಪರಿಣಾಮ ಮುಡುಕುತೊರೆ ಕಾವೇರಿ ನದಿಯಲ್ಲಿ ನೀರಿನ ಸೆಲೆ ಹತ್ತಾರು ಅಡಿಗಳಷ್ಟು ಕ್ಷೀಣಿಸಿದೆ. ನೀರಿನ ಕೊರತೆ ತೆಪ್ಪೋತ್ಸವದ ಮೇಲೆ ಪರಿಣಾಮ ಬೀರಲಿದೆ. ನೀರಿನ್ನು ಸಂಗ್ರಹಿಸಿಟ್ಟುಕೊಳ್ಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನದಿಯಲ್ಲಿ ಬಂಡ್‌ಗಳನ್ನು ನಿರ್ಮಿಸಬೇಕು. ಜಾತ್ರೆಯಲ್ಲಿ ಧೂಳು ಮೇಲೇಳದಂತೆ ಲೋಕೋಪಯೋಗಿ ಇಲಾಖೆ ರಸ್ತೆಗೆ ನೀರು ಹಾಕಿಸಬೇಕು. ಮಾವಿನಹಳ್ಳಿಯಿಂದ ಕುರ್ಜು ಬರುವುದರಿಂದ ವಿದ್ಯುತ್ ಕಂಬದ ಮೇಲಿನ ವೈರುಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಫೆ. 2ರಿಂದ ಮಲ್ಲಿಕಾರ್ಜುನಸ್ವಾಮಿ ಜಾತ್ರೆ: ಮುಡುಕುತೊರೆಯಲ್ಲಿ ಫೆ.2ರಿಂದ ಶ್ರೀ ಭ್ರಮರಾಂಭಿಕ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ರಾಮಸ್ವಾಮಿ ನಾಲೆಗೆ ಫೆ. 18ರವರೆಗೂ ನೀರು ಹರಿಸಬೇಕು. ತಲಕಾಡು ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿತ ಅಗ್ನಿಶಾಮಕ ಠಾಣೆ ಹಾಗೂ ವಸತಿ ಗೃಹಗಳ ಸಮುಚ್ಛಯ ಕಾಮಗಾರಿಗೆ ಹಿನ್ನೆಡೆಯಾಗಿದ್ದು, ಸ್ಥಳೀಯ ಮುಖಂಡರು ಪರ್ಯಾಯ ನಿವೇಶನವನ್ನು ಕಲ್ಪಿಸಿಕೊಡಬೇಕು ಎಂದು ಮಹದೇವಪ್ಪ ಅವರು ಸಲಹೆ ನೀಡಿದರು.  
ಉಪವಿಭಾಗಾಧಿಕಾರಿ ಬಸವರಾಜು, ನಂಜನಗೂಡು ಉಪವಿಭಾಗದ ಎಎಸ್ಪಿ ಡಾ. ರಾಜಾ, ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಉಪಾಧ್ಯಕ್ಷೆ ಕಮಲಾಕ್ಷಿ ನಾಗರಾಜು, ಕಾರ್ಯನಿರ್ವಾಹಕ ಅಧಿಕಾರಿ ಜೈಕೃಷ್ಣ, ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಸದಸ್ಯೆ ಮಲ್ಲಾಜಮ್ಮ, ತಲಕಾಡು ಗ್ರಾಪಂ ಅಧ್ಯಕ್ಷ ಚಿಕ್ಕಮಾದನಾಯ್ಕ, ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶಕುಮಾರ, ಪಪಂ ಮುಖ್ಯಾಧಿಕಾರಿ ವಿಲ್ಸನ್ ಇದ್ದರು.
ರಾಸುಗಳ ಪರಿಷೆ ನಿಷೇಧ
ಕಾಲುಬಾಯಿ ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಭಾರಿಯ ಮುಡುಕುತೊರೆ ಜಾತ್ರಾ ಮಹೋತ್ಸವದಲ್ಲಿ ರಾಸುಗಳ ಪರಿಷೆ(ದನಗಳ ಜಾತ್ರೆ)ಯನ್ನು ನಿಷೇಧಿಸಲಾಗಿದೆ ಎದು ಸ್ಪಷ್ಟಪಡಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ನರಸೀಪುರ ಪಟ್ಟಣದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೂರು ಕೋಟಿ ರು. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement