ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಗೀತ, ಅನುಭಾವ ಸೂಫಿ ಕೊಡುಗೆ

Vishwanath S
Updated On : 19 Jan 2014, 1:18 am

ಮೈಸೂರು: ಜಾತ್ಯತೀತ ಸಂಗೀತ ಪರಂಪರೆಯನ್ನು ಬೆಳೆಸಿಕೊಂಡಿರುವ ಸೂಫಿಗಳು ಸಂಗೀತ, ಕಾವ್ಯ, ಅನುಭಾವವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಸಂಶೋಧಕ ಪ್ರೊ. ರೆಹಮತ್ ತರೀಕೆರೆ ಹೇಳಿದರು.
ರಂಗಾಯಣದಲ್ಲಿ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶನಿವಾರ ಡಾ. ಜಿ.ಎಸ್. ಶಿವರುದ್ರಪ್ಪ ವೇದಿಕೆಯಲ್ಲಿ ನಡೆದ ಸೂಫಿ- ಸಂತ- ಸಾಮರಸ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಜನತೆಯನ್ನು ಸಂಸ್ಕೃತಿಯೊಂದಿಗೆ ಅನುಸಂಧಾನ ಮಾಡಲು ಹೊರಟವರು ಸೂಫಿಗಳು. ಆಯಾ ಸ್ಥಳೀಯ ಭಾಷೆಯಲ್ಲಿಯೇ ಹೇಳಿ, ಪ್ರಾದೇಶಿಕಕ್ಕೆ ಅರ್ಥವಾಗುವ ರೀತಿ ಅನುಭಾವಿಸಿ ಹೇಳುತ್ತಿದ್ದರು ಎಂದರು.
ಪ್ರಾಂತ, ಭಾಷೆ, ಧರ್ಮ ಸೇರಿದಂತೆ ಸೀಮೋಲ್ಲಂಘನೆ ಮಾಡುತ್ತಿದ್ದ ಸೂಫಿಗಳು, ಕಾವ್ಯ- ಸಂಗೀತ ಸಾಮರಸ್ಯ ಬೆಳೆಸಿದರು. ಇದರಲ್ಲಿ ಚಿಷ್ತಿಗಳ ಕೊಡುಗೆಯೂ ಇದೆ. ಕೂಡು ತತ್ವವಿಲ್ಲದಿದ್ದರೆ ಸಂಗೀತ ಹುಟ್ಟುವುದಿಲ್ಲ. ರಾಗ ರಾಗಗಳು ಬೆರೆತು ಸಂಗೀತ ಹುಟ್ಟುತ್ತದೆ. ಸಂಕರ ತತ್ವ ಇದರಲ್ಲಿಯೇ ಅಡಗಿದೆ. ಆರೂಢರು, ಸಂಕರರು, ಸೂಫಿಗಳು ಆರು ದಶಕಗಳ ಕಾಲ ಇದ್ದು ಸಮಾಜದ ಉದ್ಧಾರಕ್ಕೆ ತತ್ವ ಬೋಧಿಸಿದರು. ಪ್ರಭುತ್ವದ ಭಾಗವಾಗಿಯೇ ಪ್ರಭುತ್ವವನ್ನು ವಿರೋಧಿಸುತ್ತಿದ್ದರು. ಕೆಲವು ಸೂಫಿಗಳು ತತ್ವಗಳಿಗಾಗಿ ಪ್ರಾಣ ಕೊಟ್ಟರು ಎಂದರು.  
ಭಾರತದ ಪ್ರಜಾಪ್ರಭುತ್ವದ ಆಂತರಿಕ ಸತ್ಯ ಹೊರ ಹಾಕಲು, ಕಲೆ- ಸಾಹಿತ್ಯದ ಮೂಲಕ ಅನುಸಂಧಾನ ರೂಪಿಸಬೇಕು. ಧರ್ಮ ವ್ಯಾಪಾರ ಮಾಡುವ ವಸ್ತುವಾಗಿ ಪರಿವರ್ತಿತಗೊಂಡಿರುವ ಇಂಥ ಸಂದರ್ಭದಲ್ಲಿ ಸಂಕರ ತತ್ವ ಅಳವಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಜಿ.ಕೆ.ಗೋವಿಂದರಾವ್ ಮಾತನಾಡಿ, ವ್ಯಕ್ತಿ- ಧರ್ಮದ ನಡುವಿನ ಸಂಬಂಧ ತಾಯಿ- ಮಗುವಿನ ಸಂಬಂಧದಂತಿರಬೇಕು. ಒಂದು ದಿನ ಕಬೀರ ಮತ್ತು ಸಂತ ಭೇಟಿಯಾದಾಗ ಏನೂ ಮಾತಾಡದೆ ಮೌನದಲ್ಲಿಯೇ ಆದಿ ದೂಡುತ್ತಾರೆ. ಇವರಿಬ್ಬರ ಭೇಟಿಯನ್ನು ಬಹಳ ಆಶ್ಚರ್ಯಕರ ರೀತಿಯಲ್ಲಿ ನಿರೀಕ್ಷಿಸಿದ್ದ ಆ ಊರಿನ ಜನತೆ ದಿನವಿಡಿ ಇವರಿಬ್ಬರನ್ನು ನೋಡಿ, ಮಾತು ಆಡದಿದ್ದರಿಂದ ಇವರೂ ಮೌನಕ್ಕೆ ಶರಣಾಗಿ ಸ್ಪರ್ಶ, ಶಬ್ದ, ಧ್ಯಾನವನ್ನು ಪಡೆದುಕೊಳ್ಳುತ್ತಾರೆ. ಒಂದು ಚೌಕಟ್ಟಿನೊಳಗೆ ಇದ್ದು ಹೊರಗಿನದನ್ನು ಕಾಣುವ, ಶರಣರು- ಜಂಗಮರ ಅನುಭಾವವನ್ನು ಸವಿಯುವ ರೀತಿಯಲ್ಲಿ ಜ್ಞಾನ ಪಡೆದುಕೊಳ್ಳುತ್ತಾರೆ ಎಂದರು. ಢಿರಂಗಾಯಣ ನಿರ್ದೇಶಕ ಎಚ್. ನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೂಫಿ ಒಂದು ಧರ್ಮವೇ ಎಂಬುದರಲ್ಲಿ ಗೊಂದಲವಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಜನ ಬೇರೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ತಾತ್ವಿಕ ದೃಷ್ಟಿಕೋನ, ಜ್ಞಾನ ನೀಡಲು ಈ ಪರಿಕಲ್ಪನೆಯೊಂದಿಗೆ ಬಹುರೂಪಿ ಆಚರಿಸುತ್ತಿದ್ದೇವೆ. ಧರ್ಮದ ಮೇಲೆ ಸಮಾಜವನ್ನು ಒಡೆಯುತ್ತಿರುವ ಸಂದರ್ಭದಲ್ಲಿ ಈ ಪ್ರಕಾರದ ಚಿಂತನೆ ಅಗತ್ಯವಿದೆ ಎಂದರು.
ರಂಗಾಯಣ ಉಪನಿರ್ದೇಶಕ ಎಸ್.ಐ. ಭಾವಿಕಟ್ಟಿ ಸ್ವಾಗತಿಸಿದರು. ಮೈಮ್ ರಮೇಶ್ ವಂದಿಸಿದರು. ಪ್ರೊ.ಎಸ್.ಆರ್. ರಮೇಶ್ ನಿರೂಪಿಸಿದರು. ವಿಕಾಸ್ ಚಂದನ್ ಮತ್ತು ತಂಡ ಸೂಫಿ ಗೀತೆಯನ್ನು ಪ್ರಸ್ತುತಪಡಿಸಿತು.
ಸೂಫಿಗಳಾರೂ ಕವಿಗಳಲ್ಲ, ಈ ಬಗ್ಗೆ ಸುಳ್ಳು ಹೇಳಬೇಡಿ
ಸೂಫಿಗಳು ಖಂಡಿತಾ ಕವಿಗಳಲ್ಲ. ಕವಿಗಳಾರೂ ಸೂಫಿಗಳಲ್ಲ. ಸೂಫಿಗಳು ಮದಿರೆ, ಮಾನಿನಿಯರಿಂದ ದೂರವಿದ್ದರು. ಈ ಬಗ್ಗೆ ಸುಳ್ಳು ಹೇಳಬೇಡಿ. ನಿಮ್ಮ ಕಾಲಿಗೆ ಬೇಕಾದರೆ ಬಿದ್ದು ಬಿಡುತ್ತೇನೆ...
- ಹೀಗಂತ ಹೇಳಿದವರು ಸೂಫಿಗಳ ಬಗ್ಗೆ ಸಂಶೋಧನಾ ಗ್ರಂಥ ಪ್ರಕಟಿಸಿರುವ ಡಾ. ಅಬ್ದುಲ್ ಹಮೀದ್.
ವಿಚಾರ ಸಂಕಿರಣದಲ್ಲಿ ಪತ್ರಕರ್ತ ಡಾ. ಜಗದೀಶ ಕೊಪ್ಪ ಅವರು ಮಾತನಾಡುತ್ತ ಸೂಫಿಗಳು ಕವಿಗಳಾಗಿದ್ದರು. ಅವರು ಮದಿರೆ, ಮಾನಿನಿಯರನ್ನು ದೇವರಿಗೆ ಹೋಲಿಸಿ ಅನುಭಾವಿಸುತ್ತಿದ್ದರು ಎಂದ ಮಾತಿಗೆ ಹಮೀದ್ ಭಾವುಕರಾಗಿ ಸ್ಪಷ್ಟನೆ ನೀಡಿದರು.
ಸೂಫಿ ಪಥ, ಶರಣ ಪಥ ಎಂಬುದರ ಬಗ್ಗೆ ಸಂಶೋಧನಾ ಗ್ರಂಥ ಪ್ರಕಟಿಸಿದ್ದೇನೆ. ನನ್ನನ್ನು ಬಿಟ್ಟರೆ ಪ್ರೊ. ರೆಹಮತ್ ತರೀಕೆರೆ ಮಾತ್ರ ಸೂಫಿಗಳ ಬಗ್ಗೆ ಬರೆದಿದ್ದಾರೆ. ನಾನು ಸಂಶೋಧನೆ ಮಾಡಿದ ಪ್ರಕಾರ ಸೂಫಿಗಳು ಹೆಂಡ ಕುಡಿಯುತ್ತಿರಲಿಲ್ಲ. ಹಾಗಾಗಿ ನೀವೆಲ್ಲರು ಸುಮ್ಮನೆ ಮಾತನಾಡಬೇಡಿ ಎಂದು ಕೋರಿದರು. ಅರಬ್ ದೇಶಗಳಲ್ಲಿದ್ದ ಸೂಫಿಗಳು ಕ್ರಿ.ಶ. 7ನೇ ಶತಮಾನದಲ್ಲಿ ಭಾರತ ಪ್ರವೇಶಿಸಿದರು. ರಾಜ ಛೇರ್ಮನ್ ಪೆರುಮಾಳ್ ಆಸ್ಥಾನಕ್ಕೆ ಬಂದ ಸೂಫಿಗಳು ಶುದ್ಧ ಚಾರಿತ್ರ್ಯರಾಗಿದ್ದರು. ಇಲ್ಲಿನವರಿಗೆ ಔಷಧೋಪಚಾರ ಮಾಡಿ ಮಾನವೀಯ ಸಂಬಂಧ ಬೆಳೆಸಿದರು.
ಮಿರ್ಜಾ ಖಾಲಿಂ ಶ್ರೇಷ್ಠ ಕವಿಯಾಗಿದ್ದರೇ ಹೊರತು ಸೂಫಿಯಲ್ಲ. ಅಬ್ದುಲ್ಲಾ ದೆಹಲ್ವಿ ಶ್ರೇಷ್ಠ ಸೂಫಿಯಾಗಿದ್ದರು ಎಂದು ಅವರು ವಿವರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಡಾ. ಜಗದೀಶ ಕೊಪ್ಪ, ಸೂಫಿಗಳು ಮದಿರೆ, ಮಾನಿನಿಯರ ಹೆಸರಿನಲ್ಲಿ ಪ್ರೇಮತತ್ವ ಪಠಿಸುತ್ತಿದ್ದರು. ದೇವರಲ್ಲಿ ಲೀನವಾಗುವುದನ್ನು ಈ ಮೂಲಕ ಮಾಡುತ್ತಿದ್ದರು. ಪರ್ಷಿಯಾದಲ್ಲಿ ಸೂಫಿ ಪಂಥ ಬೆಳೆಯಿತು. ಆ ಪ್ರದೇಶ ಮರಳುಗಾಡಾದ್ದರಿಂದ ಮನರಂಜನೆಗಾಗಿ ಮದಿರೆ, ಮಾನಿನಿಯರನ್ನು ಜನ ಅವಲಂಬಿಸಿದ್ದರು. ಆದ್ದರಿಂದ ಸೂಫಿ ಗೀತೆಗಳಲ್ಲಿ ಪ್ರೇಮಗೀತೆ ಹುಟ್ಟಿಕೊಂಡವು.
ಉಮರ್ ಖಾಯಂ ರಚಿಸಿದ ಗೀತೆಗಳು ತಮ್ಮ ವಾದಕ್ಕೆ ಸೂಕ್ತ ಉದಾಹರಣೆ ಎಂದರು. ಹಂಪಿಯ ಕನ್ನಡ ವಿವಿ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಮಂಜುನಾಥ ಬೆಳಕೆರೆ ನಿರೂಪಿಸಿದರು.
ಮದಿರೆ ಆಹಾರದ ಒಂದು ಭಾಗ.  ಮದ್ಯಪಾನ ಮಾಡುವುದು ತಪ್ಪು ಎಂದಾದರೆ ಸಾಹಿತಿಗಳಾರೂ ಉಳಿಯುತ್ತಿರಲಿಲ್ಲ. ರಂಗಾಯಣವೂ ಕೂಡ. ಡಾ. ಅಬ್ದುಲ್ ಹಮೀದ್ ಮದಿರೆ ವಿಚಾರವಾಗಿ ಕೆನ್ನೆಗೆ ಹೊಡೆದ ರೀತಿಯಲ್ಲಿ ಮಾತನಾಡುತ್ತಾರೆ. ಸಾಹಿತಿ ಎಲ್ಲವನ್ನೂ ಸ್ವೀಕರಿಸಬೇಕು. ಸೂಫಿ ಗೀತೆಗಳಲ್ಲಿ ಮದಿರೆ ಕೇವಲ ರೂಪಕವಷ್ಟೇ.
- ಪ್ರೊ. ರೆಹಮತ್ ತರೀಕೆರೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement