ಆರೋಗ್ಯ, ಶಿಕ್ಷಣ ಸರ್ವರಿಗೂ ಸಮಪಾಲು
ಮೈಸೂರು: ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಸಮರ್ಪಕವಾಗಿ ತಲುಪಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬನ್ನಿಮಂಟಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಲ್ಲಿ ಶಿಕ್ಷಣ ಮತ್ತು ಆರೋಗ್ಯ ಆದ್ಯತಾ ವಲಯಗಳು. ಇದನ್ನು ಪಡೆಯುವಲ್ಲಿ ಬಡವರು ಮತ್ತು ಶ್ರೀಮಂತರೆಂಬ ಭೇದಭಾವ ಕೂಡದು. ಪ್ರಮುಖವಾಗಿ ಇವೆರಡು ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಬೇಕು. ಇದಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಗಳು ಜನರನ್ನು ಸಮರ್ಪಕವಾಗಿ ಮುಟ್ಟಬೇಕು ಎಂದರು. ಮಕ್ಕಳ ಆರೋಗ್ಯವು ಬಹುಮುಖ್ಯವಾಗಿದ್ದು, ಈ ದಿಸೆಯಲ್ಲಿ ಪೋಲಿಯೋ ತಡೆಗಟ್ಟುವ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಇದಕ್ಕೆ ಪೂರಕವಾಗಿ ಗರ್ಭಿಣಿಯರ ಆರೋಗ್ಯ ಸುಧಾರಿಸುವುದು ಸಹ ಅತಿ ಮುಖ್ಯ. ಈ ದಿಸೆಯಲ್ಲಿ ಹೆರಿಗೆ ಆಸ್ಪತ್ರೆಗಳನ್ನು ಉನ್ನತೀಕಣಗೊಳಿಸಲಾಗುವುದು ಎಂದರು.
ಶಾಸಕ ತನ್ವೀರ್‌ಸೇಠ್, ಮೇಯರ್ ಎನ್.ಎಂ.ರಾಜೇಶ್ವರಿ, ಜಿಲ್ಲಾಧಿಕಾರಿ ಸಿ.ಶಿಖಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ನಗರ ಪಾಲಿಕೆ ಆಯುಕ್ತ ಪಿ.ಜಿ.ರಮೇಶ್, ಡಿಎಚ್‌ಒ ಡಾ. ಡಿ.ಎಸ್ ಉಮಾ, ನೋಡೆಲ್ ಅಧಿಕಾರಿ ಡಾ. ಲತಾ ಇದ್ದರು. 2014ನೇ ಸಾಲಿನ ಮೊದಲ ಸುತ್ತಿನ ಈ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 3,3,161 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ 1588 ಲಸಿಕಾ ಕೇಂದ್ರಗಳನ್ನು ಹಾಗೂ 125 ಸಂಚಾರಿ ವಾಹನಗಳ ಮೂಲಕ ಲಸಿಕೆ ಅಭಿಯಾನ ನಡೆಸಲಾಯಿತು.
ಇಲವಾಲ: ತಾಲೂಕಿನ ಇಲವಾಲ ಪ್ರಾಥಮಿಕ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿದರು.