ಚುಂಚನಕಟ್ಟೆಯಲ್ಲಿ ಶ್ರೀರಾಮ ತೆಪ್ಪೋತ್ಸವ
ಕೆ.ಆರ್. ನಗರ: ತಾಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರಾಮದೇವರ ತೆಪ್ಪೋತ್ಸವ ಶನಿವಾರ ರಾತ್ರಿ ವೈಭವಯುತವಾಗಿ ನಡೆಯಿತು.
ದೇವಾಲಯದಿಂದ ಶ್ರೀರಾಮ, ಲಕ್ಷಣ, ಸೀತಾ ದೇವರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಹೊತ್ತು ತಂದು ಕಾವೇರಿ ನದಿಯ ದಡದಲ್ಲಿ ವಿದ್ಯುತ್ ಲೈಟ್ಗಳು ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.
ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಮೂರು ಬಾರಿ ಸುತ್ತಿಸಲಾಯಿತು. ತೆಪ್ಪದಲ್ಲಿದ್ದ ಅರ್ಚಕರು ಉತ್ಸವ ಮೂರ್ತಿಗಳಿಗೆ ಮಂಗಳಾರತಿಯನ್ನು ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ರಾಮನಿಗೆ ಜೈಕಾರ, ಗೋವಿಂದಾ ಎಂದು ಘೋಷಣೆಗಳನ್ನು ಮೊಳಗಿಸಿದರು.
ದಂಡಾಧಿಕಾರಿಗೆ ಬೆದರಿದ ಅಧಿಕಾರಿಗಳು: ತೆಪ್ಪೋತ್ಸವವನ್ನು ಪ್ರತಿ ವರ್ಷದಂತೆ ನಿಗದಿತ ಸಮಯದಲ್ಲಿ ನಡೆಸಲು ಮುಂದಾದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿ ಬಿ.ಎನ್.ವೀಣಾ ತೆಪ್ಪೋತ್ಸವವನ್ನು ಬೇಗ ನಡೆಸುವಂತೆ ಸೂಚಿಸಿದ ಪರಿಣಾಮ ಪ್ರತಿ ವರ್ಷ ಸಂಜೆ 7ರಿಂದ ರಾತ್ರಿ 8.30ರ ತನಕ ನಡೆಯುತ್ತಿದ್ದ ತೆಪ್ಪೋತ್ಸವ ಈ ಬಾರಿ ಕೇವಲ 30 ನಿಮಿಷಗಳಲ್ಲೇ ಮುಗಿದು ಹೋಯಿತು.
ಈ ಕಾರಣದಿಂದ ಸಾವಿರಾರು ಮಂದಿ ಭಕ್ತಾಧಿಗಳು ತೆಪ್ಪೋತ್ಸವ ವೀಕ್ಷಣೆಯಿಂದ ವಂಚಿತರಾದರು. ಹೊಸೂರು, ಮಿರ್ಲೆ, ಸಾಲಿಗ್ರಾಮ, ಹೆಬ್ಬಾಳು, ಕೆ.ಆರ್.ನಗರ ಸೇರಿದಂತೆ ಇನ್ನಿತರ ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳು ತಾಲೂಕು ಆಡಳಿತ ತೆಪ್ಪೋತ್ಸವ ಕಾರ್ಯಕ್ರಮದ ಸಮಯವನ್ನು ಪ್ರಚಾರಪಡಿಸದೆ ತಮಗಿಷ್ಟ ಬಂದ ಹಾಗೆ ತೆಪ್ಪೋತ್ಸವ ನಡೆಸುವುದಾದರೆ ಯಾಕೆ ನಡೆಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ತಹಸೀಲ್ದಾರ್ ಬಿ.ಎನ್.ವೀಣಾ, ಉಪತಹಸೀಲ್ದಾರ್ ತಿಮ್ಮಯ್ಯ, ಆರ್ಐ ಶ್ರೀನಿವಾಸ್, ಮಹೇಂದ್ರ, ನಾಗರಾಜ್, ಮುಜರಾಯಿ ಇಲಾಖೆ ಅಧಿಕಾರಿ ಚಂದ್ರಾಚಾರ್, ದೇವಾಲಯದ ಆಡಳಿತ ಅಧಿಕಾರಿ ಚಂದ್ರಮೋಹನ್ ಇದ್ದರು.