ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರ್ಯಾಯ ಔಷಧ ಬಳಕೆ ಅರಿವು

Vishwanath S
Updated On : 20 Jan 2014, 12:23 pm

ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನ ವೆಲ್‌ನೆಸ್ ಸೆಂಟರ್ ಹಾಗೂ ನಕ್ಷಾ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಪರ್ಯಾಯ ಔಷಧ ಬಳಕೆ ವ್ಯವಸ್ಥೆ ಕುರಿತ ಉಪನ್ಯಾಸವು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ. ಕೆ.ಲಕ್ಷ್ಮೀಶ್ ಉಪಾಧ್ಯಾಯ ಮಾತನಾಡಿ, ಭಾರತೀಯ ಔಷಧೀಯ ಪದ್ಧತಿಯು ಪುರಾತನ ಹಾಗೂ ಮಹತ್ವದ್ದಾಗಿದೆ. ಆಯುರ್ವೇದವನ್ನು ಹೇಗೆ ಬಳಸಬಹುದು ಎಂಬುದನ್ನು ಪೂರ್ವಜರು ತಿಳಿಸಿಕೊಟ್ಟಿದ್ದಾರೆ. ನಮ್ಮ ದೇಶೀಯ ಔಷಧ ಪದ್ಧತಿಯು ಅನೇಕ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಹೊಂದಿದೆ ಎಂದರು.
ವಿಶ್ವ ಪ್ರಾಣಿಕ್ ಹೀಲಿಂಗ್ ಫೌಂಡೇಷನ್ನಿನ ಡಾ. ಶ್ರೀಕಾಂತ್ ಜೋಯಿಶ್, ಡಾ. ಅಜಿತ್ ಕುಮಾರ್ ಅರಸ್, ಡಾ. ಅಶೋಕ್ ಸಾತ್ಪತೆ ಹಾಗೂ ಡಾ.ಎಚ್.ಎನ್.ಮಮತಾ ರಾಣಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ವಿ.ಪ್ರಭಾಕರ, ನಕ್ಷಾ ಫೌಂಡೇಷನ್ ಸಂಚಾಲಕಿ ತೇಜಸ್ವಿನಿ ಚೇತನ್ ಹಾಗೂ ವೆಲ್‌ನೆಸ್ ಸೆಂಟರ್ ಸಂಚಾಲಕಿ ಪೂರ್ಣಿಮಾ ಇದ್ದರು.
ಪ್ರೊಬೆಷನರಿ ಅಧಿಕಾರಿಗಳ ಪಾರಂಪರಿಕ ನಡಿಗೆ
ಮೈಸೂರು: ಕೆಎಸ್‌ಪಿಎಸ್ ಮತ್ತು ಐಪಿಎಸ್‌ನ ಪ್ರೊಬೆಷನರಿ ಅಧಿಕಾರಿಗಳಿಗೆ ಭಾನುವಾರ ಪಾರಂಪರಿಕ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಪ್ರೊಬೇಷನರಿ ಅಧಿಕಾರಿಗಳು ಭಾಗವಹಿಸಿದ್ದರು.
ಪುರಭವನ ಆವರಣದಿಂದ ಆರಂಭವಾದ ಈ ಪಾರಂಪರಿಕ ನಡಿಗೆಯು ದೊಡ್ಡ ಗಡಿಯಾರ, ಹಳೆ ಪ್ರತಿಮೆ ವೃತ್ತ, ಅರಮನೆ, ಕೆ.ಆರ್.ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಇರ್ವಿನ್ ರಸ್ತೆ, ನೆಹರು ವೃತ್ತದ ಮೂಲಕ ಮತ್ತೆ ಪುರಭವನ ತಲುಪಿತು.
ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರ್‌ಮಠ್ ನಡಿಗೆಯ ನೇತೃತ್ವ ವಹಿಸಿದ್ದರು. ಪತ್ರಕರ್ತ ಈಚನೂರು ಕುಮಾರ್ ಪಾರಂಪರಿಕ ಕಟ್ಟಡಗಳ ಕುರಿತು ಮಾಹಿತಿ ನೀಡಿದರು.
ಕನಸುಗಳೇ ಮಕ್ಕಳ ಹಾದಿಗೆ ಭದ್ರ ಬುನಾದಿ
ಮೈಸೂರು: ಕನಸುಗಳು ಮಕ್ಕಳ ಯಶಸ್ಸಿನ ಹಾದಿಗೆ ಬುನಾದಿಯಾಗುತ್ತಿವೆ. ಅಂತಹ ಕನಸುಗಳನ್ನು ಮಕ್ಕಳಲ್ಲಿ ಶಿಕ್ಷಕರು ಮೂಡಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ ಹೇಳಿದರು.
ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜತೆ ಜತೆಗೆ ಮಕ್ಕಳಲ್ಲಿ ನೈತಿಕ ಮೌಲ್ಯ, ಆತ್ಮಸ್ಥೈರ್ಯ, ಉತ್ತಮ ಗುಣಗಳನ್ನು ಬೆಳೆಸಬೇಕು. ಈ ಶಾಲೆಯಲ್ಲಿ ಅಂತಹ ವಾತಾವರಣವಿದೆ ಎಂಬುದರ ಬಗ್ಗೆ ಕೇಳಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೈಗಾರಿಕೋದ್ಯಮಿ ಚಿದಾನಂದ್ ಹಿಂದಿನ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ, ಹಿಂದಿನ ಶಿಕ್ಷಣ ಸೌಕರ್ಯದ ಬಗ್ಗೆ ಕೂಲಂಕಷವಾಗಿ ತಿಳಿಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಖಲತಾ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್‌ಕುಮಾರ್ ಶೆಟ್ಟಿ, ಪ್ರಾಂಶುಪಾಲ ಸ್ಟ್ಲಾನ್ಲಿ ಆಂಟೋನಿ, ಆಡಳಿತಾಧಿಕಾರಿ ಮುಕುಂದ್ ಇದ್ದರು.
ಬಾಬಾಬುಡನ್‌ಗಿರಿ ವಿವಾದ; ಶೀಘ್ರ ತೀರ್ಪು
ಮೈಸೂರು: ವಿವಾದಕ್ಕೀಡಾಗಿರುವ ಬಾಬಾ ಬುಡನ್‌ಗಿರಿ ವಿಚಾರವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಸದ್ಯದಲ್ಲಿಯೇ ನ್ಯಾಯಾಲಯವು ತೀರ್ಪು ನೀಡಲಿದೆ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹೇಳಿದರು. ರಂಗಾಯಣದಲ್ಲಿ ಆಯೋಜಿಸಿದ್ದ ಸೂಫಿ- ಸಂತ- ಜಾತ್ಯತೀತತೆ ಕುರಿತ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾ ಬುಡನ್‌ಗಿರಿಯು ಹಿಂದೂಗಳಿಗೆ ಸೇರಬೇಕು. ಅಲ್ಲಿ ಬ್ರಾಹ್ಮಣ ಪುರೋಹಿತರು ಪೂಜೆ ಮಾಡಬೇಕು ಎಂಬ ಸಿ.ಟಿ.ರವಿ ಅವರ ಆಸೆ ಈಡೇರುವುದಿಲ್ಲ ಎಂದರು. ಸಿ.ಟಿ.ರವಿ ಅವರು ಇತ್ತೀಚೆಗೆ ಏರ್ಪಡಿಸಿದ್ದ ದತ್ತಯಾತ್ರೆಯ ಸ್ತಬ್ಧಚಿತ್ರವೊಂದರಲ್ಲಿ ಮಗುವೊಂದಕ್ಕೆ ದತ್ತಾತ್ರೇಯರ ವೇಷ ಧರಿಸಿ ಮೆರವಣಿಗೆ ಮಾಡಿದರು. ಆ ಮಗುವು ಜನಿವಾರ ಧರಿಸಿತ್ತು. ವಾಸ್ತವದಲ್ಲಿ ದತ್ತಾತ್ರೇಯರು ಸನಾತನ ಧರ್ಮ ವಿರೋಧಿಸಿ ಜಾತ್ಯತೀತರಾಗಿ ಉಳಿದವರು. ಅವರು ಜನಿವಾರ ವಿರೋಧಿಯಾಗಿದ್ದರು ಎಂದರು.
ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ಮೈಸೂರು: ಭಾರತೀಯ ಸೋಷ್ಯಲಿಸ್ಟ್ ಡೆಮಾಕ್ರಟಿಕ್ ಪಕ್ಷವು ಭಾನುವಾರ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತು.
ಪಕ್ಷವನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲಾಯಿತು. ಉದಯಗಿರಿ ಬಡಾವಣೆಯ ಹಿಲ್‌ಟಾಪ್ ಚೌಕದಲ್ಲಿ ನಡೆದ ಅಭಿಯಾನ ಕಾರ್ಯಯಕ್ರಮಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಮೊಹಮದ್ ಫೈಸಲ್ ಚಾಲನೆ ನೀಡಿದರು. ಮನೆಗಳು, ಅಂಗಡಿ, ರಸ್ತೆ ಬದಿ ವ್ಯಾಪಾರಿಗಳ ಬಳಿಯಲ್ಲೂ ಎಸ್‌ಡಿಪಿಐ ಕಾರ್ಯಕರ್ತರು ನಿಧಿ ಸಂಗ್ರಹಿಸಿದರು. ಇಂದಿನಿಂದ ಈ ನಿಧಿ ಸಂಗ್ರಹ ಕಾರ್ಯವು ಒಂದು ವಾರ ನಗರಾದ್ಯಂತ ನಡೆಯಲಿದೆ.
ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮ್ಜದ್ ಖಾನ್, ಖಜಾಂಚಿ ಪಿ.ಎಂ.ಹುಸೇನ್, ಕಾರ್ಯದರ್ಶಿ ಕುಮಾರಸ್ವಾಮಿ, ಉಪಾಧ್ಯಕ್ಷ ಮತೀನ್ ಬೇಗ್, ಪಾಲಿಕೆ ಸದಸ್ಯರಾದ ಸ್ವಾಮಿ, ಮಹದೇವು, ಮುಖಂಡರಾದ ತಬ್ರೇಜ್ ಸೇಟ್, ಅರ್ಮಾನ್, ಕಿರಣ್‌ಕುಮಾರ್, ಅಕ್ರಂ ಶರೀಫ್ ಇದ್ದರು.
ಪ್ರೊ. ಎಚ್‌ಎಸ್‌ಎಲ್ ಭಟ್ಟರಿಗೆ ಪ್ರಶಸ್ತಿ
ಮೈಸೂರು: ಕಗ್ಗದ ಭಟ್ಟರೆಂದೇ ಪರಿಚಿತರಾದ ಪ್ರೊ.ಎಚ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿಯ ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಫೆ.16ರಂದು ನಡೆಯುವ ಅಕಾಡೆಮಿಯ 14ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ವಿ.ಎಸ್.ಸಂಪತ್ಕುಮಾರಾಚಾರ್ಯ(ಸಂಗೀತ), ಡಾ. ಜಿ.ಎಸ್.ಹೆಗ್ಡೆ(ವೈದ್ಯಕೀಯ), ಪ್ರೊ. ಬಿ.ಎನ್.ಮಂಜುನಾಥಯ್ಯ (ಶಿಕ್ಷಣ) ಮತ್ತು ಪ್ರೊ. ಎಸ್.ಶಿವಾಜಿ ಜೋಯಿಸ್ (ಸಾಹಿತ್ಯ) ಅವರನ್ನು ಗೌರವಿಸಲಾಗುವುದು.
ರೋಟರಿಯಿಂದ ಪೋಲಿಯೊ ಹನಿ
ಮೈಸೂರು: ರೋಟರಿ ಮೈಸೂರು ಉತ್ತರ ಸಂಸ್ಥೆ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಸಿತು. ರಾಮಕೃಷ್ಣನಗರದ ನೃಪತುಂಗ ಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ಶಿವಲಿಂಗಸ್ವಾಮಿ ಕಾರ್ಯಕ್ರಮ ಚಾಲನೆಗೊಳಿಸಿದರು. ರೋಟರಿಯನ್‌ಗಳಾದ ರಾಮಪ್ರಸಾದ್, ಜಗದೀಶ್, ಮಹದೇವಪ್ಪ, ಶಿವರಾಜ್‌ರಾವ್, ಎ.ಎನ್.ಶಾಸ್ತ್ರಿ, ಮಹಾವೀರ್, ಧನರಾಜ್ ಪ್ರಭಾಕರ್, ಎಂ.ಜಿ.ಸ್ವಾಮಿ, ರತ್ನರಾಜ್, ನಂಜಯ್ಯ, ಉದಯ್‌ಕುಮಾರ್, ರಾಜಶೇಖರಮೂರ್ತಿ, ರಾಮಾರಾಧ್ಯ, ಶಾರದ, ಷಣ್ಮುಖ, ಹೇಮಶ್ರೀ ಹಾಗೂ ದಿವ್ಯ ಇದ್ದರು. ರಾಮಕೃಷ್ಣನಗರದ ಕೆ ಬ್ಲಾಕ್‌ನ ಗಣಪತಿ ದೇವಸ್ಥಾನ, ಇ ಮತ್ತು ಎಫ್ ಬ್ಲಾಕ್‌ನ ರಾಮಕೃಷ್ಣ ಪಾಠಶಾಲೆ, ಜಿ ಬ್ಲಾಕ್‌ನ ಗಣಪತಿ ದೇವಸ್ಥಾನ, ಶ್ರೀರಾಂಪುರದ ವಿಜಯ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮಂಟ್, ಅರವಿಂದನಗರದ ಗಣಪತಿ ದೇವಸ್ಥಾನ ಹಾಗೂ ಸಿದ್ಧಾರ್ಥನಗರದ ಶ್ರೀಕಾಂತ ಪ್ರೌಢಶಾಲೆಯಲ್ಲಿ ಪೋಲಿಯೋ ಹನಿ ಕಾರ್ಯಕ್ರಮ ನಡೆಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement