ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಲ್ಸ್ ಪೋಲಿಯೊಗೆ ವಿವಿಧೆಡೆ ಚಾಲನೆ

Vishwanath S
Updated On : 20 Jan 2014, 12:20 pm

ಹುಣಸೂರು: ದೇಶವನ್ನು ಪೋಲಿಯೊ ಮುಕ್ತ ಮಾಡಲು ಸರ್ಕಾರದ ಜೊತೆ ರೋಟರಿ ಸಂಸ್ಥೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.
ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಪಲ್ಸ್ ಪೋಲಿಯೊ ಹನಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್ ಅವರ ಪುತ್ರಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಐದು ವರ್ಷದೊಳಗಿನ ಮಕ್ಕಳಿಗೆ ಹನಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಈ ಮೂಲಕ ಪೋಲಿಯೋ ತಡೆಗಟ್ಟಬೇಕೆಂದು ಮನವಿ ಮಾಡಿದರು.  ತಾಲೂಕಿನ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶ ಸೇರಿದಂತೆ 27147 ಮಕ್ಕಳಿಗೆ ಹನಿ ಹಾಕುವ ಗುರಿ ಇಟ್ಟುಕೊಳ್ಳಲಾಗಿದ್ದು, ಈಗ 26518 ಮಕ್ಕಳಿಗೆ ಹನಿ ಹಾಕಲಾಗಿದೆ. ಉಳಿದ ಮಕ್ಕಳಿಗೆ ನಾಳೆ ಮತ್ತು ನಾಡಿದ್ದು ಮನೆ ಮನೆಗೆ ತೆರಳಿ ಪರಿಪೂರ್ಣಗೊಳಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಕೀರ್ತಿಕುಮಾರ್ ತಿಳಿಸಿದರು.
ಜಿಪಂ ಸದಸ್ಯರಾದ ರಮೇಶ್, ಡಾ. ಪುಷ್ಪಾವತಿ ಅಮರನಾಥ್, ತಾಪಂ ಸದಸ್ಯ ರಂಗಸ್ವಾಮಿ, ಕಾಂಗ್ರೆಸ್ ಅಧ್ಯಕ್ಷ ಬಿಳಿಕೆರೆ ಬಸವರಾಜು, ಸಾರ್ವಜನಿಕರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಉದಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ಕೀರ್ತಿಕುಮಾರ್, ವೈದ್ಯರಾದ ಡಾ. ಚಂದ್ರಶೇಖರ್, ಚಿದನಂದಮೂರ್ತಿ, ಕೃಷ್ಣಸ್ವಾಮಿ ಇದ್ದರು.
ರೋಟರಿಯಿಂದ ಪೋಲಿಯೊ ಜಾಥಾ
ಹುಣಸೂರು: ಪಲ್ಸ್ ಪೋಲಿಯೊ ಹನಿ ಕಾರ್ಯಕ್ರಮದ ಪ್ರಯುಕ್ತ ಜನರಲ್ಲಿ ಅರಿವು ಮೂಡಿಸಲು ಪಟ್ಟಣದ ರೋಟರಿ ಶಾಲಾ ವಿದ್ಯಾರ್ಥಿಗಳು ಭಾನುವಾರ ಜಾಥಾ ನಡೆಸಿದರು. ಶಾಲಾವರಣದಿಂದ ಶನಿವಾರ ಹೊರಟ ಜಾಥಾದಲ್ಲಿ ಪೋಲಿಯೋ ಹನಿ ತಪ್ಪದೆ ಹಾಕಿಸಿ, ಅಂಗವಿಕಲ ಮಕ್ಕಳು ಹುಟ್ಟದಂತೆ ನೋಡಿಕೊಳ್ಳಿರೆಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ರೋಟರಿ ಸಂಸ್ಥೆ ವತಿಯಿಂದ ಪ್ರತ್ಯೇಕ ಕೌಂಟರ್ ನಿರ್ಮಿಸಿ ಹುಣಸೂರು ಬಸ್ ನಿಲ್ದಾಣದೊಳಗೆ ಮತ್ತು ಸಾರ್ವಜನಿಕರ ಆಸ್ಪತ್ರೆಯಲ್ಲಿ ರೋಟರಿ ಪಲ್ಸ್ ಪೋಲಿಯೋ ಚೇರ್ಮನ್ ಡಾ. ಸರೋಜಿನಿ ವಿಕ್ರಂ, ರೋಟರಿ ಕ್ಲಬ್ ಅಧ್ಯಕ್ಷ ರಾಜಶೇಖರ್ ಮತ್ತು ಸದಸ್ಯರು ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್, ರೋಟರಿ ಶಾಲಾ ಸಮಿತಿ ಅಧ್ಯಕ್ಷ ಆರ್.ಆನಂದ್, ಕಾರ್ಯದರ್ಶಿ ಹನಗೋಡು ನಟರಾಜ್, ರೋಟರಿಯನ್‌ಗಳಾದ ಅನಂತ ರಾಜೇ ಅರಸು, ಧರ್ಮಾಪುರ ನಾರಾಯಣ್, ಡಾ. ವೃಷಬೇಂದ್ರಸ್ವಾಮಿ, ಡಾ. ಸರೋಜಿನಿ ವಿಕ್ರಂ, ಮುಖ್ಯ ಶಿಕ್ಷಕ ರೇಣುಕಾಪ್ರಸಾದ್, ಶಿಕ್ಷಕ ಪ್ರಸನ್ನ, ನವ್ಯ ಇದ್ದರು.
ಹನಿ ಹಾಕಿಸಿ ರೋಗ ತಡೆಗಟ್ಟಿ
ರಾವಂದೂರು: ಪ್ರತಿ ಮಗುವಿಗೂ ಪೋಲಿಯೊ ಹನಿ ಹಾಕಿಸಿ ರೋಗವನ್ನು ತಡೆಗಟ್ಟುವಂತೆ ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಮನವಿ ಮಾಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾರಕ ರೋಗಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು. ಡಾ. ಸಿ.ಎನ್.ಪುನೀತ್, ಡಾ. ದೀಪಿಕಾ, ಮುಖಂಡರಾದ ಆರ್.ಟಿ.ಸತೀಶ್, ಅಂಗನವಾಡಿ ಕಾರ್ಯಕರ್ತೆ ರಾಜಾಮಣಿ, ದಾದಿಯಾರಾದ ಹೇಮಾವತಿ, ಚೈತನ್ಯ ಇದ್ದರು.
ಪೋಲಿಯೊ ಮುಕ್ತ ರಾಷ್ಟ್ರ ಹೆಗ್ಗಳಿಕೆ ಉಳಿಸಿಕೊಳ್ಳೋಣ
ಎಚ್.ಡಿ. ಕೋಟೆ: ಭಾರತದಲ್ಲಿ ಪೋಲಿಯೋ ನಿರ್ಮೂಲನೆಗೆ ಒತ್ತು ನೀಡಿದ್ದರಿಂದ ಇಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತವು ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಸರು ಪಡೆದಿದೆ ಎಂದು ಶಾಸಕ  ಎಸ್. ಚಿಕ್ಕಮಾದು ಹೇಳಿದರು. ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ತಾಲೂಕಿನಲ್ಲಿ 5 ವರ್ಷ ತುಂಬಿದ 27611 ಮಕ್ಕಳಿಗೆ ಹನಿ ಹಾಕಲಾಗುತ್ತಿದೆ. ಇದಕ್ಕಾಗಿ 800 ಸಿಬ್ಬಂದಿ, 40 ಮಂದಿ ವೈದ್ಯಾಧಿಕಾರಿಗಳು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಮಹೇಂದ್ರ ಇದ್ದರು.
ತಾಂಡವಪುರ
ತಾಂಡವಪುರ: ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ಪಟೇಲ್ ಜವರೇಗೌಡ ಭಾನುವಾರ ಚಾಲನೆ ನೀಡಿದರು. ಡಾ. ನಿಸರ್ಗ, ವಿನಾಯಕ, ಸ್ವರ್ಣಲತಾ, ಕಡಕೂಳ ಗ್ರಾಪಂ ಆದ್ಯಕ್ಷೆ ನೀಲಾ ಸಿದ್ದಪ್ಪ, ಸಿಂಧುವಳ್ಳಿ ಗ್ರಾಪಂ ಸದಸ್ಯ ಕುಮಾರ್, ಮಹದೇವು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement