ಭಯ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ
ಕ.ಪ್ರ.ವಾರ್ತೆ , ಮೈಸೂರು , ಜ. 19
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಮ್ಮೆಗೆ ಆಯ್ಕೆಯಾಗಲಿಲ್ಲ ಎನ್ನುವ ಭಯ ಬೇಡವೇ ಬೇಡ. ಒಂದೇ ಉದ್ದೇಶದಿಂದ ಪರೀಕ್ಷೆಗಳನ್ನು ನಿಮ್ಮತನದೊಂದಿಗೆ ಎದುರಿಸಿದರೆ ಯಶಸ್ಸು ನಿಮ್ಮನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಹೇಳಿದರು.
ಭಾನುವಾರ ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಪರೀಕ್ಷಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಿದ ಅವರು, ತಾವು ಪರೀಕ್ಷೆ ಎದುರಿಸಿದ ರೀತಿ, ಯಶಸ್ಸು ಪಡೆಯಲು ಅನುಸರಿಸಿದ ಕ್ರಮಗಳು, ಈಗಿನ ಅಗತ್ಯಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ತಮ್ಮ ವಿಷಯದಲ್ಲಿ ಪರಿಣತಿ ಹೊಂದಿರಬೇಕು. ಸೂಕ್ತ ವಿಷಯ ಆಯ್ಕೆ ಮಾಡಿಕೊಂಡು ಅದರಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕು. ಈ ವಿಷಯಗಳಲ್ಲಿ ತಜ್ಞತೆ ಇರುವವರೊಂದಿಗೆ ಒಡನಾಟ ಇಟ್ಟುಕೊಂಡಾಗ ಇನ್ನಷ್ಟು ಖಚಿತಗೊಳ್ಳಬಹುದು. ಜತೆಗೆ ಗುಂಪು ಚರ್ಚೆಯೂ ಸಹಾಯಕಾರಿ. ಇದರೊಂದಿಗೆ ವಿಷಯವನ್ನು ವಿಶ್ಲೇಷಣಾತ್ಮಕವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಭಾಷೆ ನಿಮ್ಮ ಆಯ್ಕೆಗೆ ಎಂದೂ ತೊಡಕಾಗುವುದಿಲ್ಲ. ಇಂಗ್ಲಿಷ್ ಬಾರದೆ ಇದ್ದರೆ ತೇರ್ಗಡೆಯಾಗುವುದಿಲ್ಲ ಎನ್ನುವ ಭಾವನೆ ತೊಡೆದು ಹಾಕಿ. ನಿಮ್ಮ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ. ಅದನ್ನು ಪರೀಕ್ಷೆಗಳಲ್ಲಿ ಖಚಿತವಾಗಿ ತೋರಿಸಿ. ಈಗ ಪ್ರಾದೇಶಿಕ ಭಾಷೆಗಳಲ್ಲಿ ಸಂದರ್ಶನ ಎದುರಿಸಲು ಕೋರಿಕೆ ನೀಡಿದರೆ ಅವಕಾಶ ನೀಡಲಾಗುತ್ತದೆ. ನಿಮ್ಮ ದೃಷ್ಟಿಕೋನ, ಬುದ್ಧಿಮತ್ತೆಯನ್ನು ಮಾತ್ರ ಅಲ್ಲಿ ಪರಿಗಣಿಸಲಾಗುತ್ತದೆ. ವ್ಯಾವಹಾರಿಕ ಕಾರಣಗಳಿಗೆ ಇಂಗ್ಲಿಷ್ ಕಲಿಯುವುದು ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವರ್ಷಕ್ಕೆ 30 ಮಂದಿ ಕನ್ನಡಿಗರು ಆಯ್ಕೆ: ಮೊದಲೆಲ್ಲಾ ಕನ್ನಡಿಗರು ಯುಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿರಲಿಲ್ಲ. ಈಗ ಪ್ರಾದೇಶಿಕ ಕಾರಣದ ಜತೆಗೆ ಕನ್ನಡಿಗರು ಸೂಕ್ತ ಮಾರ್ಗದರ್ಶನಗಳೊಂದಿಗೆ ಪರೀಕ್ಷೆ ಎದುರಿಸುತ್ತಿರುವುದರಿಂದ ಯಶಸ್ವಿಯಾಗುತ್ತಿದ್ದಾರೆ. ವರ್ಷಕ್ಕೆ 30 ಕನ್ನಡಿಗರು ಕೇಂದ್ರ ಸೇವೆಗೆ ಆಯ್ಕೆಯಾಗುತ್ತಿದ್ದಾರೆ. ಅದೇ ರೀತಿ ಮಹಿಳೆಯರಿಗೂ ಹೆಚ್ಚಿನ ಅವಕಾಶ ಸಿಗುತ್ತಿದೆ ಎಂದರು.
ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪೃಥ್ವಿದತ್ತ ಚಂದ್ರಶೋಭಿ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸೆಲ್ವಪಿಳ್ಳೈ ಅಯ್ಯಂಗಾರ್ ಇದ್ದರು.
ಕೆಪಿಎಸ್ಸಿಯಲ್ಲಿ ಸುಧಾರಣೆ
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವರು, ಕೆಪಿಎಸ್ಸಿಯಲ್ಲಿ ನಡೆದಿರುವ ಗೊಂದಲಗಳಿಂದ ಪರೀಕ್ಷೆ ಎದುರಿಸುವ ನಮ್ಮಂತವರಲ್ಲಿ ತಳಮಳಗಳು ಸೃಷ್ಟಿಯಾಗಿವೆ. ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿದರೂ ಇಂಥ ಪರಿಸ್ಥಿತಿ ಎದುರಾದಾಗ ಏನು ಮಾಡುವುದು ಎನ್ನುವ ಪ್ರಶ್ನೆ ವಿದ್ಯಾರ್ಥಿಯೊಬ್ಬರಿಂದ ಎದುರಾಯಿತು.
ಇದಕ್ಕೆ ತಾಳ್ಮೆಯಿಂದಲೇ ಉತ್ತರಿಸಿದ ಅವರು, ಇಂಥ ಗೊಂದಲಗಳು ಆಗಿರುವುದು ತಿಳಿದಿರುವುದೇ. ಇಡೀ ವ್ಯವಸ್ಥೆ ಸುಧಾರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಇಂಥ ಪ್ರಮಾದಗಳು ನಡೆಯಲು ಅವಕಾಶವೇ ಇರುವುದಿಲ್ಲ. ಪರೀಕ್ಷೆಗಳು, ಸಂದರ್ಶನ ಎಲ್ಲದರಲ್ಲೂ ಗೌಪ್ಯತೆ ಕಾಪಾಡಲಾಗುತ್ತದೆ. 50 ವರ್ಷದ ಅವಧಿಯಲ್ಲಿ ದುರ್ಬಳಕೆಯ ಒಂದೇ ಒಂದು ಆರೋಪ ಕೇಳಿ ಬಂದಿಲ್ಲ. ಪರೀಕ್ಷೆ ತೆಗೆದುಕೊಳ್ಳುವವರು ಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಧೈರ್ಯದಿಂದ ಪರೀಕ್ಷೆ ಎದುರಿಸಿ ಗೆದ್ದು ಬನ್ನಿ ಎಂದು ಆತ್ಮವಿಶ್ವಾಸ ತುಂಬಿದರು.