ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯುವ 'ಕೈ'ಗೆ ಆಯ್ಕೆ

Vishwanath S
Updated On : 20 Jan 2014, 12:23 pm

ಮೈಸೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ನಡೆದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಸ್.ರಘು ಆಯ್ಕೆಯಾಗಿದ್ದಾರೆ. ಚಾಮರಾಜ ಕ್ಷೇತ್ರದ ಅಧ್ಯಕ್ಷರಾಗಿ ಮುದಾಬಿರ್‌ನವಾಜ್, ಪ್ರಧಾನ ಕಾರ್ಯದರ್ಶಿಗಳಾಗಿ ಎನ್. ಯೋಗಾನಂದ, ವಿ. ಮಧು, ಮೋಹಿತ್‌ಗೌಡ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾಗಿ ನದೀಮ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಸಲ್ಮಾನ್, ಪಿರಿಯಾಪಟ್ಟಣ ಕ್ಷೇತ್ರದ ಅಧ್ಯಕ್ಷರಾಗಿ ಮೊಹಮ್ಮದ್ ಷಫೀ, ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷರಾಗಿ ಅಪ್ಪಣ್ಣ, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾಗಿ ಸಂತೋಷ್, ಉಪಾಧ್ಯಕ್ಷರಾಗಿ ರಾಜೇಶ್ ಆಯ್ಕೆಯಾಗಿದ್ದಾರೆ.
ಅಪರಿಚಿತ ಶವ ಪತ್ತೆ
ಮೈಸೂರು: ಜೆ.ಕೆ.ಮೈದಾನ ಪಕ್ಕದ ಪಾದಾಚಾರಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸುಮಾರು 50 ವರ್ಷ ವಯಸ್ಸಿನ ಪುರುಷ ಮೃತಪಟ್ಟಿದ್ದು, 163 ಸೆ.ಮೀ ಎತ್ತರ, ಕಂದು ಬಣ್ಣ, ಗುಂಡು ಮುಖ ಹೊಂದಿದ್ದಾರೆ. ವ್ಯಕ್ತಿಯ ಬಲ ಪಕ್ಕೆಯ ಬಳಿ ಕಪ್ಪು ಕಾರೆ ಹರಳಿನ ಗುರುತು ಇದೆ. ಕಪ್ಪು ಪ್ಯಾಂಟ್, ಬಿಳಿ ನಿಕ್ಕರ್ ಮತ್ತು ಕ್ರೀಮ್ ಬನಿಯನ್ ಧರಿಸಿದ್ದಾರೆ. ದೂ. 2418306 ಸಂಪರ್ಕಿಸಬಹುದು.
ಕ್ಯಾನ್ಸರ್ ತಪಾಸಣೆ
ಮೈಸೂರು: ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಹಯೋಗದಲ್ಲಿ ಜ. 21ರ ಬೆಳಗ್ಗೆ 9ಕ್ಕೆ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ. 4240600, 4280011 ಸಂಪರ್ಕಿಸಬಹುದು.
ಪ್ರಾಣಿಗಳ ದತ್ತು
ಮೈಸೂರು: ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಹಲವರು ಪ್ರಾಣಿ ಹಾಗೂ ಪಕ್ಷಿಗಳನ್ನು ನಿಗದಿತ ಶುಲ್ಕ ಪಾವತಿಸಿ ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ತಿಳಿಸಿದ್ದಾರೆ. ಮೈಸೂರಿನ ಕೃಷ್ಣ ಆನಂದ್ ವೆಂಕಟರಮಣ್ ಅವರು 10 ಸಾವಿರ ಪಾವತಿಸಿ ಕೃಷ್ಣಮೃಗ, ಗಿಳಿ ಹಾಗೂ ಲವ್‌ಬರ್ಡ್‌ನ್ನೂ (6 ತಿಂಗಳಿಗೆ), ಇಂದಿರಾ ವೆಂಕಟರಮಣ್ ಎಂಬವರು 11 ಸಾವಿರ ಪಾವತಿಸಿ ನವಿಲು ಮತ್ತು ಕೆಂಪು ಟೂಕನ್ ಪಕ್ಷಿಯನ್ನೂ, ಮಹಾರಾಷ್ಟ್ರದ ನಾಸಿಕ್‌ನ ಸಂಜಯ್ ಜೆ.ಗುಜರಾತಿ ಅವರು 1 ಸಾವಿರ ಪಾವತಿಸಿ ಲವ್ ಬರ್ಡ್‌ನ್ನೂ ದತ್ತು ಪಡೆದಿದ್ದು, ಈ ಎಲ್ಲ ಪ್ರಾಣಿಪಕ್ಷಿ ಪ್ರಿಯರನ್ನು ರವಿ ಅಭಿನಂದಿಸಿದ್ದಾರೆ.
ಇಂದು ಆದಿಶ್ರೀಗೆ ಗುರುವಂದನೆ
ಹುಣಸೂರು: ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ವತಿಯಿಂದ ಜ.20ರ ಬೆಳಗ್ಗೆ 9.30ಕ್ಕೆ ಬಿಳಿಕೆರೆಯಲ್ಲಿ ಗುರುವಂದನೆ ಹಾಗೂ ಜನಪ್ರತಿನಿಧಿಗಳ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಬಿಳಿಕೆರೆ ಹೋಬಳಿ ಅಧ್ಯಕ್ಷ ಸೋಮಶೇಖರ್ ತಿಳಿಸಿದ್ದಾರೆ. ಅಂದಿನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ವಸತಿ ಸಚಿವ ಅಂಬರೀಷ್, ಶಾಸಕರಾದ ಕೆ.ವೆಂಕಟೇಶ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ವಾಸು, ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷ ಮಹದೇವ್, ಸದಸ್ಯರಾದ ಸಿ.ಟಿ. ರಾಜಣ್ಣ, ಕೆ. ಲಲಿತಾ ದೇವೇಗೌಡ ಭಾಗವಹಿಸುವರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪದಾಧಿಕಾರಿಗಳಾದ ರಾಜೇಶ್, ಗೌರಿಶಂಕರ, ದೇವರಾಜ್, ರುದ್ರೇಗೌಡ, ಪ್ರಸನ್ನ ಇದ್ದರು.
ಇಂದು ಕಣ್ಣಿನ ತಪಾಸಣೆ ಶಿಬಿರ
ಎಚ್.ಡಿ. ಕೋಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಜ.20ರ ಬೆಳಗ್ಗೆ 9ಕ್ಕೆ ತಾಲೂಕು ಹ್ಯಾಂಡ್‌ಪೋಸ್ಟ್‌ನ ಮೈರಾಡಾ ಕಚೇರಿ ಸಭಾಂಗಣದಲ್ಲಿ ಉಚಿತ ಕಣ್ಣಿ ತಪಾಸಣೆಯ ಶಿಬಿರ ಏರ್ಪಡಿಸಿದ್ದು, ಆಸಕ್ತರು ಭಾಗವಹಿಸಬಹುದು. ಚಿಕಿತ್ಸೆ ಅಗತ್ಯ ಇರುವವರನ್ನು ಕೊಯಮತ್ತೂರಿನ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ಆಸ್ಪತ್ರೆ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಾಳೆಯಿಂದ ಅಂತರಸಂತೆ ಜಾತ್ರೆ
ಎಚ್.ಡಿ. ಕೋಟೆ: ಸರಗೂರು ಹೋಬಳಿಯ ನಿಲುವಾಗಿಲು ಮತ್ತು ಅಂತರಸಂತೆ ಶ್ರೀ ಮಹದೇಶ್ವರ ಜಾತ್ರೆಯು ಜ. 21ರಿಂದ 23ರವರೆಗೆ ನಡೆಯಲಿದೆ. ಜ.20ರ ಬೆಳಗ್ಗೆ ಹೋಮ ರುದ್ರಾಭಿಷೇಕ, ವಿರಕ್ತ ಮಠ ಮಹಾದೇವಸ್ವಾಮಿಗಳ ಸಮುಖದಲ್ಲಿ 5 ಜೋಡಿಗಳ ಸಾಮೂಹಿಕ ವಿವಾಹ, ರಾತ್ರಿ 10 ಗಂಟೆಗೆ ಧಾರಾವಾಹಿ ನಟರಿಂದ ಶ್ರೀಕೃಷ್ಣ ಸಂಧಾನ ಎಂಬ ನಾಟಕ ಪ್ರದರ್ಶನ, ಜ. 21ರ ಬೆಳಗ್ಗ 9.30ಕ್ಕೆ ಮಹದೇಶ್ವರ ಸ್ವಾಮಿಗೆ ಹಾಲು- ಹರವಿ ಹಾಗೂ ಕೊಂಡೋತ್ಸವ, ರಾತ್ರಿ 9ಕ್ಕೆ ದಕ್ಷಯಜ್ಞ ಎಂಬ ಪೌರಾಣಿಕ ನಾಟಕ ಹಾಗೂ ಜ.22ರಂದು ಬೆಳಗ್ಗೆ ಸ್ವಾಮಿ ಉತ್ಸವ ಹಾಗೂ ಸಂಜೆ ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement