ಲೋಕಾಯುಕ್ತರಿಂದ ದೂರು ಸ್ವೀಕಾರ
ಮೈಸೂರು: ಸಾರ್ವಜನಿಕ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮನವಿ ಹಾಗೂ ದೂರುಗಳ ಪರಿಶೀಲನೆಯಲ್ಲಿ ಜರುಗುತ್ತಿರುವ ವಿಳಂಬ, ಅಧಿಕಾರ ದುರುಪಯೋಗ, ಸರ್ಕಾರಿ ಹಣದ ದುರುಪಯೋಗ, ದುರಾಡಳಿತ ಕುರಿತು ಜಿಲ್ಲೆಯ ಹುಣಸೂರಿನ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು.
ಲೋಕಾಯುಕ್ತ ಕಾಯ್ದೆ 1984ರ ಅಡಿಯಲ್ಲಿ ನಮೂನೆ- 1 ಹಾಗೂ 2ರಲ್ಲಿ ಸಲ್ಲಿಸುವ ದೂರು ಅರ್ಜಿಗಳನ್ನು ಸ್ವೀಕರಿಸಿ, ನೋಂದಾಯಿಸಿ ವಿಚಾರಣೆಗೆ ಒಳಪಡಿಸುವ ಕಾರ್ಯಕ್ರಮವನ್ನು ಜ. 27ರಿಂದ 29ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಏರ್ಪಡಿಸಲಾಗಿದೆ.
ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಅವರು ಜ.30ರ ಬೆಳಗ್ಗೆ 10ರಿಂದ ಸಂಜೆವರೆಗೆ ಹುಣಸೂರು ಪುರಸಭಾ ಕಚೇರಿ ಆವರಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದೂರು ಅರ್ಜಿ ವಿಚಾರಣೆ ನಡೆಸುವರು.
ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿ ಸಲ್ಲಿಸಲಾದ ಹಾಗೂ ವಿಚಾರಣೆ ಹಂತಗಳಲ್ಲಿನ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ತಾಲೂಕುಗಳ ವ್ಯಾಪ್ತಿಯ ಅರ್ಜಿಗಳ ವಿಚಾರಣೆ ನಡೆಯಲಿದೆ. ನೊಂದ ಸಾರ್ವಜನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಮೈಸೂರು ಉಪವಿಭಾಗಾಧಿಕಾರಿ ಬಸವರಾಜು ಕೋರಿದ್ದಾರೆ.
ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲೂ ಜ.27ರಿಂದ 30ರವರೆಗೆ ದೂರು ಸ್ವೀಕರಿಸಲಾಗುವುದು.