ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ವಿಫಲ: ಶೈಲಾ
ಹುಣಸೂರು: ಭರತ ಖಂಡದಲ್ಲಿ ಮಹಿಳೆಯನ್ನು ದೇವತೆ ಎಂದು ಕರೆದು ಪೂಜಿಸುತ್ತಿರುವುದು ಒಂದೆಡೆಯಾದರೆ, ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು ಮತ್ತೊಂದು ಕಡೆ ಕಂಡು ಬರುತ್ತದೆ. ಇದು ದುರ್ದೈವದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾ. ಬಿ.ಎಂ.ಶೈಲಾ ಹೇಳಿದರು.
ತಾಲೂಕಿನ ಸೋಮನಹಳ್ಳಿಯಲ್ಲಿ ಶನಿವಾರ ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕಾನೂನು ಅರಿವು ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹೆಣ್ಣುಭ್ರೂಣ ಹತ್ಯೆಯಿಂದಾಗಿ ಗಂಡು- ಹೆಣ್ಣಿನ ಅನುಪಾತ ವ್ಯತ್ಯಾಸವಾಗುತ್ತಿದೆ. ಇದು ದೇಶದ ಹಿತದೃಷ್ಟಿಯಿಂದ ಒಳಿತಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ ಎಂದರು.
ದೂರು ನೀಡಿ: ಹೆಣ್ಣುಭ್ರೂಣ ಹತ್ಯೆ ಬಗ್ಗೆ ಮಾಹಿತಿ ಸಿಕ್ಕಲ್ಲಿ 1091ಕ್ಕೆ ಕರೆ ಮಾಡಿ ದೂರು ನೀಡಿ ಎಂದರು.
ಸಿವಿಲ್ ನ್ಯಾ. ಸಿ. ವೀರಭದ್ರಯ್ಯ ಎಲ್ಲರಿಗೂ ಸಮಾನ ಕಾನೂನು ಕಲ್ಪಿಸುವ ದೃಷ್ಟಿಯಿಂದ ಒಂದು ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಎಲ್ಲರಿಗೂ ಉಚಿತ ಕಾನೂನಿನ ಸೌಲಭ್ಯವಿದ್ದು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ವಕೀಲೆ ಪವಿತ್ರ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಕುರಿತು ಸಿಡಿಪಿಒ ಇಲಾಖೆಯ ಮಹಿಳಾ ಸಂರಕ್ಷಣಾಧಿಕಾರಿ ರಂಗಮಣಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಸುರೇಶ್, ವಕೀಲರಾದ ವೆಂಕಟೇಶ್, ದೇವರಾಜ್, ಸೋಮಶೇಖರ್, ಜಿಪಂ ಸದಸ್ಯ ರಮೇಶ್, ಗ್ರಾಪಂ ಸದಸ್ಯೆ ಲತಾಮಣಿ, ಕಾನೂನು ಸೇವಾ ಸಮಿತಿಯ ಪ್ರಮಿಳಾ ಇದ್ದರು.