20 ಕೋಟಿ ವೆಚ್ಚದಲ್ಲಿ ತಲಕಾಡು ರಸ್ತೆ ಅಭಿವೃದ್ಧಿ
ಟಿ. ನರಸೀಪುರ: ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ವೈದ್ಯನಾಥೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ತಲಕಾಡು ಮುಖ್ಯ ರಸ್ತೆಯನ್ನು 20 ಕೋಟಿ ವೆಚ್ಚದಲ್ಲಿ ವಿಸ್ತರಿಸಿ, ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ತಲಕಾಡು ಗ್ರಾಮದ ಸರ್ಕಾರಿ ಅತಿಥಿ ಗೃಹದಲ್ಲಿ ಭಾನುವಾರ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ತಲಕಾಡು ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದ್ದು, ಅಧಿಕ ಜನಸಂಚಾರ ಹಾಗೂ ವಾಹನಗಳ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಿಂದ ಶ್ರೀ ವೈದ್ಯನಾಥೇಶ್ವರ ದೇವಾಲಯವರೆಗಿನ ರಸ್ತೆ ನೂತನ ಯೋಜನೆಯಿಂದ ಸಿಮೆಂಟ್ ರಸ್ತೆಯಾಗಿ ಪರಿವರ್ತನೆಯಾಗಲಿದೆ ಎಂದರು.
ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಚುನಾಯಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಸ್ತೆ ವಿಸ್ತರಣೆಗೆ ಗ್ರಾಮಸ್ಥರು ಸಹಕಾರ ನೀಡಬೇಕು. ತಲಕಾಡಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲಾಗಿದೆ. ಐಟಿಐ ಕಾಲೇಜು ತೆರೆಯುವುದು ಸೇರಿದಂತೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆಯಿದೆ. ಜನಸಂಖ್ಯೆ ಆಧರಿಸಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ತಿಳಿಸಿದರು.
ಹೊಳೆಸಾಲಿಗೆ ನೂತನ ಸೇತುವೆ: ತಾಲೂಕಿನ ಕಾವೇರಿಪುರ (ಹೊಳೆಸಾಲು) ಗ್ರಾಮದಲ್ಲಿ ಕಾವೇರಿ ನದಿಗೆ 30 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನೂತನ ಸೇತುವೆ ಮಾಡಲಾಗುವುದು. ಸೇತುವೆ ನಿರ್ಮಾಣ ಮಾಡುವ ಸಂಬಂಧ 27ರಿಂದ 30 ಕೋಟಿ ಯೋಜನೆಗೆ ಕೆಆರ್ಡಿಸಿಎಲ್ ಈಗಾಗಲೇ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಲೋಕೋಪಯೋಗಿ ಅಧೀಕ್ಷಕ ಎಂಜಿನಿಯರ್ ಸತ್ಯನಾರಾಯಣ, ಇಇ ಕೃಷ್ಣಮೂರ್ತಿ, ಎಇಇ ನಟರಾಜು, ಉಪವಿಭಾಗಾಧಿಕಾರಿ ಬಸವರಾಜು, ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಇಒ ಜೈಕೃಷ್ಣ, ಜಿಪಂ ಎಇಇ ಪಿ. ಲಕ್ಷ್ಮಣ್ರಾವ್, ಪಶುಪಾಲನೆ ಎಡಿ ಡಾ. ಚಿನ್ನಸ್ವಾಮಿ, ಸಿಡಿಪಿಒ ಬಸವರಾಜು, ಶಿಕ್ಷಣ ಸಂಯೋಜಕ ಪ್ರಕಾಶ್, ಮುಖಂಡರಾ ಎಂ. ಮಲ್ಲಿಕಾರ್ಜುನಸ್ವಾಮಿ, ಟಿ.ಎಚ್. ಮಂಜುನಾಥ್ ಇದ್ದರು.
ಅಕ್ರಮ ಮರಳಿಗೆ ದಂಡ, 2 ವರ್ಷ ಜೈಲು
ಕಾವೇರಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡಿದರೆ 25 ಸಾವಿರ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮರಳು ಗಣಿಗಾರಿಕೆಯಲ್ಲಿ ಪರಿಸರಕ್ಕೆ ಹಾನಿಯಾಗಬಾರದೆಂದು ನೂತನ ನೀತಿ ಜಾರಿಗೆ ತರಲಾಗಿದೆ. ಹೊಸ ನೀತಿಯಂತೆ ಮರಳು ಸಾಗಾಣಿಕೆಗೆ ಪರ್ಮಿಟ್ ಪಡೆಯುವುದು ಕಡ್ಡಾಯವಾಗಿದೆ. ಅಕ್ರಮ ಮರಳು ಸಾಗಿಸಿದರೆ ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.