ಗೂಡ್ಸ್ ವಾಹನ ಡಿಕ್ಕಿ:ಬೈಕ್ ಸವಾರ ಸಾವು
ಮೈಸೂರು: ಗೂಡ್ಸ್ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಮೃತಪಟ್ಟಿರುವ ಘಟನೆ ಟಿ. ನರಸೀಪುರ ರಸ್ತೆಯಲ್ಲಿರುವ ದುದ್ದಗೆರೆ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ನಾಗರಾಜು (30) ಮೃತಪಟ್ಟವರು. ಇವರ ಪತ್ನಿ ಇಂದಿರಾ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಗರಾಜು ಮತ್ತು ಇಂದಿರಾ ಬೈಕಿನಲ್ಲಿ ಟಿ. ನರಸೀಪುರದ ಕಡೆಯಿಂದ ಮೈಸೂರಿಗೆ ಬರುತ್ತಿದ್ದಾಗ ಎದುನಿಂದ ಬಂದ ಮಹೇಂದ್ರ ಮ್ಯಾಕ್ಸಿಮೋ ಗೂಡ್ಸ್ ವಾಹನವು ದುದ್ದಗೆರೆ ಗೇಟ್ ಬಳಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೈಕ್ ಸವಾರ ನಾಗರಾಜು ಮೃತಪಟ್ಟಿದ್ದು, ಬೈಕಿನ ಹಿಂಬದಿಯಲ್ಲಿದ್ದ ಇಂದಿರಾ ಗಾಯಗೊಂಡಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.