ಪೊಲೀಸರಿಗೆ ಶಾಸಕ ತರಾಟೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಜ.20
ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏನು ಮಾಡುತ್ತಿದ್ದೀರಿ ಎಂದು ಶಾಸಕ ಎಸ್. ಚಿಕ್ಕಮಾದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೋಟೆ ಎಸ್ಐ ಶಿವಮಾದಯ್ಯ ಸಭೆಗೆ ಗೈರುಹಾಜರಾಗಿ, ಅವರ ಬದಲಿಗೆ ಎಎಸ್ಐ ಸಣ್ಣನಾಯಕ ಎಂಬವರನ್ನು ಕಳುಹಿಸಿದ್ದರಿಂದ ಕುಪಿತಗೊಂಡು, ಗಣರಾಜ್ಯೋತ್ಸವದಂತಹ ನಾಡಹಬ್ಬ ಆಚರಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಹೀಗಿದ್ದರೂ ಎಸ್ಐ ಶಿವಮಾದಯ್ಯ ಗೈರುಹಾಜರಾಗಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನಲ್ಲಿ ಪೊಲೀಸರು ಯಾವ ರೀತಿ ಕಾನೂನು ಸುವ್ಯವಸ್ಥೆ ಮಾಡುತ್ತಿದ್ದಾರೆ ಎಂಬುದಕ್ಕೆ ಆಲನಹಳ್ಳಿ ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದರೂ ಪೊಲೀಸರು ರಕ್ಷಣೆ ನೀಡಿಲ್ಲ. ಹೀಗಾಗಿ ಅಲ್ಲಿ ಕೆಲವು ಕಿಡಿಗೇಡಿಗಳು ಮಹಾರಾಣಿ ಕಾಲೇಜಿನ ಉಪನ್ಯಾಸಕರೊಬ್ಬರು ಭಾಷಣಕ್ಕೆ ಬಂದಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ರೀತಿಯೇ ಎಂದು ಪ್ರಶ್ನಿಸಿದರು.
ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದ ಚಿಕ್ಕಮಾದು, ನಾವು ಕೇಳುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಸಾಧ್ಯವಿಲ್ಲ. ನೀವೇನೂ ಮಾತನಾಡಬೇಡಿ. ಸುಮ್ಮನೆ ಕುಳಿತುಕೊಳ್ಳಿ ಎಂದು ಎಎಸ್ಐ ಸಣ್ಣನಾಯಕ ಅವರನ್ನು ಕೂರಿಸಿದರು.
ಈ ಬಾರಿಯ ಗಣರಾಜ್ಯೋತ್ಸವವನ್ನು ಎಂದಿನಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು. ಗಣ್ಯರಿಗೆ ಸನ್ಮಾನ, ಸ್ತಬ್ಧಚಿತ್ರಗಳು, ಜನಪದ ಕಲಾತಂಡಗಳು ಮುಂತಾದವುಗಳೊಂದಿಗೆ ಕಾರ್ಯಕ್ರಮ ನಡೆಸಲಾಗುವುದು. ಪ್ರತಿಯೊಬ್ಬ ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜನಪ್ರತಿನಿಧಿಗಳ ಗೈರು: ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಚಿಕ್ಕಮಾದು ಅವರನ್ನು ಹೊರತುಪಡಿಸಿ ಜಿಪಂ, ತಾಪಂ, ಪಪಂ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ, ಸದಸ್ಯರಾಗಲಿ ಯಾವುದೇ ಚುನಾಯಿತ ಪ್ರತಿನಿಧಿಗಳು ಭಾಗವಹಿಸದೆ ಗೈರುಹಾಜರಾಗಿದ್ದು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿತ್ತು.
ತಹಸೀಲ್ದಾರ್ ಕೃಷ್ಣ, ಸರಗೂರು ಜೆಡಿಎಸ್ ಅಧ್ಯಕ್ಷ ರವಿ, ಅಧಿಕಾರಿಗಳಾದ ಅಚ್ಚುತ್, ಮೋಹನ್ಕುಮಾರ್, ಬಿಂದಿಯಾ, ಅಮೃತಾ, ಉದಯಕುಮಾರ್, ಸಂತೋಷ್ ಇದ್ದರು.