ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭೂ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಧರಣಿ

Rashmi Kasaragodu
Updated On : 21 Jan 2014, 1:17 am

ಕ.ಪ್ರ.ವಾರ್ತೆ   ಮೈಸೂರು   ಜ. 20
ಜಿಲ್ಲೆಯ ರೈತರ ಮತ್ತು ದಲಿತರ ಭೂ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
ಮೈಸೂರು ಜಿಲ್ಲೆಯಲ್ಲಿ ಹಲವಾರು ಭೂ ಸಮಸ್ಯೆಗಳಿಂದ ರೈತರು, ದಲಿತರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಕಂದಾಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ, ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಖಾಸಗಿ ಡೆವಲಪರ್ಸ್ಗಳ ಏಜೆಂಟರಾಗಿ ಕೆಲಸ ಮಾಡುತ್ತಿದ್ದು, ರೈತರನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಸರ್ಕಾರಿ ಭೂ ದಾಖಲೆಗಳನ್ನು ತಿದ್ದಿ, ಸುಳ್ಳು ದಾಖಲೆಗಳನ್ನು ಡೆವಲಪರ್ಸ್ಗಳಿಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರೈತರು ಅವರ ಭೂಮಿ ಖಾತೆ ವಗೈರೆ, ಸರ್ವೆ ಪೋಡುಗಳಿಗಾಗಿ ನಿರಂತರವಾಗಿ ಕಚೇರಿಗಳನ್ನು ಅಲೆಯುತ್ತಿದ್ದಾರೆ. ಕಂದಾಯ ಇಲಾಖೆಯವರು ತಾಂತ್ರಿಕ ಕಾರಣಗಳನ್ನು ನೀಡಿ ವಿಳಂಬ ಮಾಡುತ್ತಿದ್ದಾರೆ. ಜಿಲ್ಲೆಯ ಕಂದಾಯ ಕಚೇರಿಯ ನೌಕರರು ಬಡವರ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.
ಹಲವು ಒತ್ತಾಯ: ಫಸಲು ಪಹಣಿ ಹಾಗೂ ಇತರೆ ಕಂದಾಯ ದಾಖಲೆಗಳನ್ನು ತಿದ್ದುಪಡಿ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಯಿಂದ ತಹಸೀಲ್ದಾರ್ ವ್ಯಾಪ್ತಿಗೆ ವಹಿಸಬೇಕು. ಪೋಡು, ಹದ್ದುಬಸ್ತುಗಳನ್ನು ಕಾಲಮಿತಿಯೊಳಗೆ ಮಾಡಿಕೊಡಬೇಕು. ಒಟ್ಟು ಇಡಿಯಾಗಿ ಸರ್ವೆ ನಂ. ದುರಸ್ತಿ ಮಾಡುವುದು, ಸರಿ ಇದ್ಯಾಗ್ಯೂ ಕ್ರಯ, ವಗೈರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ವೈಯಕ್ತಿಕ ಸರ್ವೆ ಮಾಡಿಸಿ ಕ್ರಮ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕೆರೆ, ಕುಂಟೆ, ಸ್ಮಶಾನ ಹಾಗೂ ಸ್ಮಶಾನ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಬೇಕು. ಅಕ್ರಮ, ನಕಲಿ ದಾಖಲೆಗಳನ್ನು ರದ್ದುಪಡಿಸಬೇಕು. ನಕಲಿ ದಾಖಲೆ ಸೃಷ್ಟಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಕೂಡಲೇ ಭಗರ್ಹುಕುಂ ದರಖಾಸ್ತು ಸಮಿತಿಗಳನ್ನು ರಚಿಸಿ ಬಾಕಿ ಉಳಿದಿರುವ ಫಾರಂ 50 ಮತ್ತು 53ರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಈ ಹಿಂದೆ ದರಖಾಸ್ತು ಸಮಿತಿ ಮಂಜೂರು ಮಾಡಿರುವ ಪ್ರಕರಣಗಳ ಸಾಗುವಳಿ ಪತ್ರವನ್ನು ಕೂಡಲೇ ವಿತರಿಸಬೇಕು. ವಜಾ ಆಗಿರುವ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಬಗರ್ಹುಕುಂ ಸಾಗುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಮತ್ತು ರೈತರ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಬೇರೆಯವರಿಗೆ ಯಾವುದೇ ರೀತಿಯಲ್ಲೂ ಮಂಜೂರು ಮಾಡಬಾರದು ಎಂದು ಅವರು ಆಗ್ರಹಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮನೆ ಮತ್ತು ನಿವೇಶನ ಕಳೆದುಕೊಂಡು 29 ಕುಟುಂಬಗಳಿಗೆ ಪರ್ಯಾಯ ನಿವೇಶನ ಮಂಜೂರು ಮಾಡಲು ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ. ಆದರೆ, ಸ್ಥಳೀಯ ಗ್ರಾಪಂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದ ನಿವೇಶನ ಮಂಜೂರು ಮಾಡಲು ವಿಳಂಬ ಆಗುತ್ತಿದೆ. ಕೂಡಲೇ ಈ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿ ಸ್ವಾಧೀನ ಪತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮರಳು ನೀತಿ ತಂದರೂ ಸಹ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದು ಗೊತ್ತಿದ್ದರೂ ಸಂಬಂಧಪಟ್ಟವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ ಸಾಮಾಜಿಕ ನ್ಯಾಯದಡಿ ಮರಳು ವಿತರಿಸಬೇಕು. ಕೇರಳ, ತಮಿಳುನಾಡು ಮತ್ತು ಇತರೆ ರಾಜ್ಯಗಳಿಗೆ ಮರಳು ಅಕ್ರಮ ಸಾಗಾಣಿಕೆ ತಡೆಗೆ ಗಡಿ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಅಕ್ರಮ ಮರಳು ಸಾಗಿಸುವವರ ಪರವಾನಗಿ ರದ್ದುಗೊಳಿಸಿ ಶಿಕ್ಷೆಗೆ ಗುರಿಪಡಿಸಬೇಕು. ಮರಳು ತೆಗೆಯಲು ಎಲ್ಲ ಹಂತಗಳಲ್ಲಿಯೂ ಜೆಸಿಬಿ ಯಂತ್ರ ಬಳಕೆ ನಿಷೇಧಿಸಬೇಕು. ಕಾರ್ಮಿಕರ ಮೂಲಕವೇ ಮರಳು ತೆಗೆಯಲು ಅವಕಾಶ ಮಾಡಿಕೊಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇ- ಟೆಂಡರ್ ರದ್ದುಪಡಿಸಿ, ಸ್ಥಳೀಯ ಲಾರಿ ಮಾಲೀಕರು ಹಾಗೂ ಕೂಲಿ ಕಾರ್ಮಿಕರ ಸಹಾಯದಿಂದ ಸರ್ಕಾರ ಮರಳು ವಿತರಣೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಸಹಾಯಧನ ನೀಡಿ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ಈ ಸಾಲಿನ ಕಬ್ಬಿಗೆ ಕೇವಲ 2400 ಮುಂಗಡ ಹಣ ಪಾವತಿಸಿದೆ. ಸರ್ಕಾರದ ತೀರ್ಮಾನದಂತೆ ಟನ್ ಕಬ್ಬಿಗೆ 2500 ಪೂರ್ಣವಾಗಿ ಪಾವತಿಸಬೇಕು ಹಾಗೂ ಟನ್ ಕಬ್ಬಿಗೆ ಸರ್ಕಾರ ಕೊಡಲು ಒಪ್ಪಿರುವ 150 ಸಹಾಯಧನವನ್ನು ಕೂಡಲೇ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಬತ್ತ ಖರೀದಿ ಕೇಂದ್ರಗಳು ಹಣ ಪಾವತಿಯಲ್ಲಿ ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ರೈತರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತ ಮುಖಂಡರಾದ ಎಂ.ಎಸ್. ಅಶ್ವಥ್ ನಾರಾಯಣರಾಜೇ ಅರಸ್, ಕೆ.ಎಂ. ಪುಟ್ಟಸ್ವಾಮಿ, ಬನ್ನೂರು ಕೃಷ್ಣಪ್ಪ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ರತ್ನಪುರಿ ಪುಟ್ಟಸ್ವಾಮಿ, ಚೋರನಹಳ್ಳಿ ಶಿವಣ್ಣ, ಬಿ.ಡಿ. ಶಿವಬುದ್ಧಿ, ಮುಖಂಡರಾದ ಗುರುಲಿಂಗೇಗೌಡ, ಪಳನಿಸ್ವಾಮಿ, ನಟರಾಜ್, ಆಲಗೂಡು ಮಹದೇವ, ಸರಗೂರು ನಟರಾಜು, ವಿದ್ಯಾಸಾಗರ್, ಬಂಗಾರಸ್ವಾಮಿ, ನಂಜುಂಡಸ್ವಾಮಿ, ಚಿಕ್ಕಣ್ಣ, ಜೋಗನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement