ಮುಕ್ತ ಮನಸ್ಸಿನಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ
ಮೈಸೂರು: ಮುಕ್ತ ಮನಸ್ಸಿನಿಂದ ಪರೀಕ್ಷೆ ಎದುರಿಸಿದಾಗ ಯಶಸ್ಸು ಸಾಧ್ಯ ಎಂದು 2012ನೇ ತಂಡದ ಐಪಿಎಸ್ ಅಧಿಕಾರಿ ಜಿ. ರಾಧಿಕಾ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಐಎಎಸ್ ಮತ್ತು ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ ಕಾರ್ಯಾಗಾರದಲ್ಲಿ ಸೋಮವಾರ ಪರೀಕ್ಷಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿಮ್ಮ ಆತ್ಮವಿಶ್ವಾಸ ಸದಾ ನಿಮ್ಮೊಡನೆ ಇರಬೇಕು. ಉತ್ತಮ ಸ್ನೇಹಿತರ ಸಖ್ಯ ಹೊರತುಪಡಿಸಿದಂತೆ ಮೊದಲು ನಿಮ್ಮ ಗುರಿ ಮುಟ್ಟುವಲ್ಲಿ ಆಸಕ್ತಿ ವಹಿಸಿ. ನೀವು ಆಯ್ಕೆ ಮಾಡಿಕೊಂಡ ವಿಷಯಗಳನ್ನು ಪ್ರೀತಿ ವಿಶ್ವಾಸದಿಂದ ಅಧ್ಯಯನ ಮಾಡಿ ಓದಿರಿ ಮತ್ತು ಬರೆಯಿರಿ. ವಿಶೇಷವಾಗಿ ಎನ್ಸಿಆರ್ಟಿ ಪುಸ್ತಕಗಳು, ಜಿ.ಎಸ್. ಮ್ಯಾನುಯಲ್, ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳು ನೀವು ಗುರಿಮುಟ್ಟಲು ಅತ್ಯಂತ ಸಹಕಾರಿ ಎಂದು ತಿಳಿಸಿದರು.
ಎಲ್ಲಾ ಸೌಲಭ್ಯ ಪಡೆದುಕೊಳ್ಳಿ: ಪರೀಕ್ಷಾರ್ಥಿಗಳ ಜೊತೆ ಸಂವಾದ ನಡೆಸಿದ ಮತ್ತೊಬ್ಬ 2012 ನೇ ತಂಡದ ಐಪಿಎಸ್ ಅಧಿಕಾರಿ ಡಾ. ಭೀಮಾಶಂಕರ್ ಎಸ್. ಗೂಳೇಶ್ ಮಾತನಾಡಿ, ಪರೀಕ್ಷೆಗೆ ಆಯ್ಕೆ ಮಾಡುವ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಅರ್ಹರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ವಿವರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭೂಗೋಳಶಾಸ್ತ್ರ ಅಧ್ಯಯನ ಕುರಿತು ಹಿರಿಯ ಭೂಗೋಳಶಾಸ್ತ್ರ ಪ್ರಾಧ್ಯಾಪಕ ಪ್ರೊ. ಪಿ. ಮಲ್ಲಪ್ಪ ವಿಷಯ ಮಂಡಿಸಿದರು. ಪ್ರೊ.ಆರ್.ಎನ್. ಪದ್ಮನಾಭ ಹಾಗೂ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.