ರಸ್ತೆಬದಿ ವ್ಯಾಪಾರಿಗಳ ಪ್ರತಿಭಟನೆ
ಮೈಸೂರು: ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುವವರನ್ನು ಪೊಲೀಸರು ತೆರವುಗೊಳಿಸುತ್ತಿರುವುದನ್ನು ಖಂಡಿಸಿ ವ್ಯಾಪಾರಿಗಳು ಸೋಮವಾರ ಪ್ರತಿಭಟಿಸಿದರು.
ನಗರದ ಗಾಂಧಿ ಚೌಕದಲ್ಲಿ ತಳ್ಳುವ ಗಾಡಿಯೊಂದಿಗೆ ಜಮಾಯಿಸಿದ ವ್ಯಾಪಾರಿಗಳು, ಶಾಸಕ ತನ್ವೀರ್ ಸೇಠ್ ಅವರಿಗೆ ಪೊಲೀಸರಿಂದ ತಮಗಾಗುತ್ತಿರುವ ತೊಂದರೆ ಹೇಳಿಕೊಂಡರು. ಸಂಚಾರಕ್ಕೆ ಅಡಚಣೆ ಆಗದಂತೆ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಂಡುವಂತೆ ಸಂಬಂಧಪಟ್ಟ ಪೊಲೀಸರಿಗೆ ಶಾಸಕ ತನ್ವೀರ್ ಸೇಠ್ ಅವರು ಸೂಚಿಸಿದರು. ಈ ಹಿನ್ನೆಲೆಯಲ್ಲಿ ರಸ್ತೆಬದಿ ವ್ಯಾಪಾರಿಗಳು ಪ್ರತಿಭಟನೆ ಹಿಂಪಡೆದರು.
ಪುಸ್ತಕ ಖರೀದಿ ದಿನಾಂಕ ವಿಸ್ತರಿಸಿ
ಮೈಸೂರು: ರಾಜ್ಯ ಗ್ರಂಥಾಲಯ ಇಲಾಖೆ 2013ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಸಗಟು ಖರೀದಿಗೆ ಸಲ್ಲಿಸಲು ಕೊನೆ ದಿನಾಂಕವನ್ನು ಫೆ.15 ರವರೆಗೆ ವಿಸ್ತರಿಸುವಂತೆ ನಗರದ ಟಿ.ಕೆ. ಬಡಾವಣೆಯ ಲೇಖಕ ಪ್ರಕಾಶಕರ ವೇದಿಕೆ ಅಧ್ಯಕ್ಷ ಎಸ್. ಚನ್ನಪ್ಪ ಇಲಾಖೆಯನ್ನು ಕೋರಿದ್ದಾರೆ. ಖರೀದಿಗೆ ಸಲ್ಲಿಸಲು ಜ.31 ಕೊನೆಯ ದಿನ ಎಂದು ಹೇಳಲಾಗಿದೆ. ಆದರೆ ಈ ಮಾಹಿತಿ ಲೇಖಕರು ಮತ್ತು ಪ್ರಕಾಶಕರಿಗೆ ಖಚಿತವಾಗಿ ತಿಳಿದಿಲ್ಲ. ಆದ್ದರಿಂದ ಪುಸ್ತಕಗಳನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.