ವೃತ್ತಿ ಆಧಾರಿತ ಕೌಶಲ ರೂಢಿಸಿಕೊಳ್ಳುವಂತೆ ಕರೆ
ಮೂಗೂರು: ಮಹಿಳೆಯರು ಸ್ವಾವಲಂಬನೆ ಬದುಕು ನಡೆಸಲು ವೃತ್ತಿ ಆಧಾರಿತ ಕೌಶಲ್ಯತೆ ರೂಢಿಸಿಕೊಳ್ಳುವಂತೆ ತಾಪಂ ಸದಸ್ಯೆ ಹ್ಯಾಕನೂರು ಶಿವಮ್ಮ ಮಹದೇವು ಹೇಳಿದರು.
ಮೂಗೂರಿನ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಸ್ಪಂದನ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಗೃಹ ತಯಾರಿಕೆ ವಸ್ತು ಪ್ರದರ್ಶನ ಹಾಗೂ ಸಂಚಾರಿ ಮಾರುಕಟ್ಟೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಮನೆಯಲ್ಲಿ ಕುಳಿತು ಸಮಯ ವ್ಯರ್ಥ ಮಾಡದೆ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಬೇಕು. ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ಆರ್ಥಿಕವಾಗಿ ಬಲವರ್ಧನೆಗೊಳ್ಳಬಹುದು ಎಂದು ಕರೆ ನೀಡಿದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜು ಮಾತನಾಡಿ, ಜಿಲ್ಲೆ ಹಾಗೂ ತಾಲೂಕು, ಹೋಬಳಿ ಮಟ್ಟದಲ್ಲಿ ಪ್ರಾಯೋಗಿಕವಾಗಿ ಮುಕ್ತ ವ್ಯಾಪಾರ ಮಾರುಕಟ್ಟೆ ದೊರಕಿಸಿಕೊಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಿತಿ ನೀಡಿದರು.
ತಾಪಂ ಸದಸ್ಯೆ ಪುಟ್ಟಮಾದಮ್ಮ ನಾಗರಾಜು, ಸೀಹಳ್ಳಿ ಗುರುಮೂರ್ತಿ, ಪ್ರೇಮಕುಮಾರಿ, ಕೆ. ಶಾಂತ ಇದ್ದರು.