ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯ, ಸಂಸ್ಕೃತಿ ಪಾತ್ರ ದೊಡ್ಡದು

Rashmi Kasaragodu
Updated On : 21 Jan 2014, 1:13 am

ಮೈಸೂರು: ವ್ಯಕ್ತಿತ್ವ ವಿಕಾಸದಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದಜೀ ಹೇಳಿದರು.
ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಮತ್ತು ಸಿಂಚನ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ವ್ಯಕ್ತಿಯ ವ್ಯಕ್ತಿತ್ವದ ವಿಕಸನದಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆ ಮಹತ್ತರ ಪಾತ್ರ ವಹಿಸುತ್ತದೆ. ಅಲ್ಲದೆ ಸಮಾಜದ ವಿಕಾಸದಲ್ಲಿಯೂ ಸಂಸ್ಕೃತಿ ಮಹತ್ತರ ಸ್ಥಾನ ಪಡೆದಿದೆ. ಒಂದು ಜನಾಂಗದ ಉತ್ಕೃಷ್ಟ ಅಭಿವ್ಯಕ್ತಿ ಎಂದರೆ ಸಾಹಿತ್ಯ ಮಾತ್ರ. ಮೈಸೂರಿನಲ್ಲಿ ಅನೇಕ ಮಹಾ ಕವಿಗಳು ಉತ್ಕೃಷ್ಟ ಸಾಹಿತ್ಯ ರಚಿಸಿದ್ದಾರೆ. ಅವುಗಳಿಗೆ ಸ್ಪಂದಿಸುವ ಮನಸ್ಸು ನಮ್ಮದಾಗಬೇಕು ಎಂದರು.
ಕೇವಲ ಪಠ್ಯಕ್ಕೆ ಸೀಮಿತವಾಗದೆ ನಮ್ಮಲ್ಲಿ ಸುಪ್ತವಾದ ಪ್ರತಿಭೆ ಹೊರ ಹಾಕಬೇಕು. ಆ ಮೂಲಕ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಆದರ್ಶ ಸಮಾಜ ಕಟ್ಟಬೇಕಿದ್ದರೆ ನಮ್ಮ ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಮತ್ತು ಲಲಿತಕಲೆಗಳನ್ನು ಕಾಪಾಡಬೇಕು. ಸಾಹಿತ್ಯ- ಸಂಸ್ಕೃತಿಯು ವಿಜೃಂಭಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇತರೆ ಸಂಸ್ಕೃತಿಯನ್ನು ಪ್ರೀತಿಸಿ, ಗೌರವಿಸಬೇಕು. ಆ ಸಂಸ್ಕೃತಿಯಲ್ಲಿನ ಒಳ್ಳೆಯದನ್ನು ಸ್ವೀಕರಿಸುವ ಭರದಲ್ಲಿ ನಮ್ಮ ಸಂಸ್ಕೃತಿ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಬಹುಮಾನ ವಿತರಿಸಿದರು. ಲಲಿತ ಕಲೆಗಳ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಎನ್. ಶ್ರೀಲತಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪಿಯು ಕಾಲೇಜು ಪ್ರಾಂಶುಪಾಲೆ ಎಂ.ಪಿ. ರಾಜೇಶ್ವರಿ, ಉಪನ್ಯಾಸಕ ಪಿ.ಎಸ್. ಮಂಜುನಾಥ್, ಟಿ. ಅರವಿಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement