ಶಾಲೆಗಳ ಅಭಿವೃದ್ಧಿಗೆ ಗಮನ ಹರಿಸಿ
ಕೆ.ಆರ್. ನಗರ: ಓದಿದ ಶಾಲೆಗೆ ಹಾಗೂ ಕಲಿಸಿದ ಗುರುಗಳಿಗೆ ಸದಾ ಋಣಿಯಾಗಿರಬೇಕು. ಅಲ್ಲದೆ, ಶಾಲೆಗಳಿಗೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ ಭಾರತಿ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶ್ರಮ ಮತ್ತು ಅದೃಷ್ಟ ಎರಡೂ ಮುಖ್ಯ. ಕೆಲವು ವೇಳೆ ಅದೃಷ್ಟ ಕೈಕೊಟ್ಟರೂ ಶ್ರಮ ಕೈ ಕೊಡುವುದಿಲ್ಲ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಮಾತನಾಡಿದರು. ಇದೇ ವೇಳೆ ವಿದ್ಯಾಮಂದಿರದ ಹಳೆಯ ವಿದ್ಯಾರ್ಥಿಗಳಾದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಅನಿಲ್ಗೌಡ, ಡಾ. ರಜನಿಕಾಂತ್, ಹರೀಶ್, ಕೆ.ಎನ್. ಪ್ರಸನ್ನ, ಜಿಪಂ ಸದಸ್ಯ ಸಿ.ಜೆ. ದ್ವಾರಕೀಶ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಡಾ.ಎನ್.ಡಿ. ಜಗನ್ನಾಥ್, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಭಟ್, ಮೈಸೂರು ವಿಜಯವಿಠ್ಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಾಸುದೇವ್ ಭಟ್, ಸಂಸ್ಥೆಯ ನಿರ್ದೇಶಕರಾದ ಡಾ. ಮೋಹನ್ದಾಸ್ ಭಟ್, ಕೆ. ನಾಗೇಶ್, ಮುಖ್ಯಶಿಕ್ಷಕ ಚಂದ್ರು, ಶಿಕ್ಷಕರಾದ ಜಗದೀಶ್, ರೇವಣ್ಣ, ಜಯಂತಿ ಇದ್ದರು.