ಸಂಭ್ರಮದ ಚಿಗುರು ಕಡಿಯುವ ಕಾರ್ಯಕ್ರಮ
ಮೂಗೂರು: ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಚಿಗುರು ಕಡಿಯುವ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ನಡೆಯಿತು.
ದೇವಾಲಯದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಅಭಿಷೇಕ ಪೂಜಾ ಕೈಂಕರ್ಯದಿಂದ ನಡೆದು ಅಮ್ಮನವರಿಗೆ ಹರಕೆ ಹೊತ್ತ ಮಹಿಳೆಯರು ದೀವಟಿಗೆ ಸೇವೆ, ಬಾಯಿಬೀಗ, ರೈತರು ತಮ್ಮ ದನಕರುವಿನ ಆರೋಗ್ಯ ವೃದ್ಧಿಸಲೆಂದು ಪಂಜಿನ ಸೇವೆ ಪೂರೈಸಿದರು.
ಚಿಗುರು ಕಡಿಯುವ ಹಬ್ಬ ಹೊಸಳ್ಳಿ ಜಾತ್ರೆ ಎಂದೇ ಬಿಂಬಿತವಾಗಿದೆ. ಗ್ರಾಮದಲ್ಲಿ ಚಿಗುರು ವೀಕ್ಷಿಸಲು ಸಹಸ್ರಾರು ಸಂಖೆಯಲ್ಲಿ ಭಕ್ತರು ಆಗಮಿಸಿದ್ದರು. ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಮನರಂಜನ ನೀಡಲು ರೈತರು ಸಾಕಿದ ಗೌಜಲ ಹಕ್ಕಿಗಳನ್ನು ತಂದು ಕಾಳಗ ಮಾಡಿಸಲಾಗುತ್ತದೆ. ಅಮ್ಮನವರು ಹೊಸಳ್ಳಿಗೆ ಆಗಮಿಸುತ್ತಿದ್ದಂತೆ ಗ್ರಾಮದ ದೇವಾಲಯದಲ್ಲಿ ಪಲ್ಲಕ್ಕಿಯಿಟ್ಟು ಪೂಜೆ ಸಲ್ಲಿಸಿದ ನಂತರ ನೇರಳೇ ಮರದಲ್ಲಿ ಚಿಗುರು ಕಡಿಯುವ ಕಾರ್ಯಕ್ರಮ ನಡೆಯುತ್ತದೆ.