ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಣ ದರೋಡೆ ಆಯ್ತು ಅಂತ ತಾನೇ ದೋಚಿದ್ದ!

Rashmi Kasaragodu
Updated On : 21 Jan 2014, 1:18 am

ಮೈಸೂರು: ಮಾಲೀಕನ ಹಣ ದರೋಡೆ ನಾಟಕವಾಡಿದ ಆರೋಪಿಯನ್ನು ಪಿರಿಯಾಪಟ್ಟಣ ಠಾಣೆ ಪೊಲೀಸರು ಸೋಮವಾರ ಬಂಧಿಸಿ, 2.98 ಲಕ್ಷ ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಕಂದೇಗಾಲ ನಿವಾಸಿ ಕಾಳಪ್ಪ ಎಂಬವರ ಪುತ್ರ ಮಂಜು (24) ಬಂಧಿತ ಆರೋಪಿ. ಪಿರಿಯಾಪಟ್ಟಣದ ಮುನ್ನಾ ಎಂಬವರ ಶುಂಠಿ ಅಂಗಡಿಯಲ್ಲಿ ಮಂಜು ಕೆಲಸ ಮಾಡಿಕೊಂಡಿದ್ದ. ಶನಿವಾರ ರಾತ್ರಿ ಮುನ್ನಾ ಅವರು ಮಂಜುವಿಗೆ 2.98 ಲಕ್ಷ ನೀಡಿ, ಕೆ.ಆರ್. ನಗರ ತಾಲೂಕಿನ ಅಂಕನಹಳ್ಳಿ ನಿವಾಸಿ ಪಾಪಣ್ಣ ಎಂಬವರಿಗೆ ತಲುಪಿಸುವಂತೆ ತಿಳಿಸಿದ್ದರು. ಅದರಂತೆ ಮಂಜು ತನ್ನ ಪಲ್ಸರ್ ಬೈಕಿನಲ್ಲಿ ಹಣ ತೆಗೆದುಕೊಂಡು ಹೋಗಿದ್ದ.
ನಾಗರಘಟ್ಟ ಹತ್ತಿರ ಅಂಕನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬೈಕಿನಲ್ಲಿ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿಕೊಂಡು ಬಂದು, ತನ್ನನ್ನು ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ, ಹಣ ಮತ್ತು ಮೊಬೈಲ್ ಕಿತ್ತುಕೊಂಡು ರಾವಂದೂರು ಕಡೆಗೆ ಪರಾರಿಯಾದರು ಎಂದು ಭಾನುವಾರ ಮಂಜು ದೂರು ದಾಖಲಿಸಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪಿರಿಯಾಪಟ್ಟಣ ಠಾಣೆ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕೃತ್ಯ ನಡೆದಿರುವುದು ಸುಳ್ಳು ಎಂಬ ನಿರ್ಧಾರಕ್ಕೆ ಬಂದರು.
ನಂತರ ದೂರು ನೀಡಿದ ಮಂಜುನನ್ನು ಸೋಮವಾರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಹಣವನ್ನು ರಾಗಿ ಮೆದೆಯಲ್ಲಿ ಬಚ್ಚಿಟ್ಟು, ದರೋಡೆ ನಾಟಕವಾಡಿರುವುದು ಬೆಳಕಿಗೆ ಬಂದಿದೆ. ಮಂಜು ತನ್ನ ಜಮೀನಿನ ರಾಗಿ ಮೆದೆಯಲ್ಲಿ ಬಚ್ಚಿಟ್ಟಿದ್ದ 2.98 ಲಕ್ಷ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯಲ್ಲಿ ಈ ಪ್ರಕರಣ ಪತ್ತೆ ಹಚ್ಚಲಾಗಿದೆ ಎಂದು ಎಸ್ಪಿ ಅಭಿನವ್ ಅಶೋಕ್ ಖರೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮಂಜು 1 ಲಕ್ಷ ಸಾಲ ಮಾಡಿಕೊಂಡಿದ್ದು, ತನ್ನ ಸಾಲ ತೀರಿಸಲು ಈ ದರೋಡೆ ನಾಟಕವಾಡಿ ಈಗ ಸಿಕ್ಕಿಬಿದ್ದಿದ್ದಾನೆ. ಆತನ ವಿರುದ್ಧ ದರೋಡೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್ರೆಡ್ಡಿ, ಹುಣಸೂರು ಉಪ ವಿಭಾಗದ ಡಿವೈಎಸ್ಪಿ ನಂಜುಂಡ ಅವರ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಎಸ್ಐಗಳಾದ ರಾಮನಾಯಕ, ಸತೀಶ್, ಮುದ್ದು ಮಾದೇವ ಮತ್ತು ಸಿಬ್ಬಂದಿ ಶಿವರಾಜು, ಶ್ರೀನಿವಾಸ, ಉಮೇಶ, ಅಶೋಕ, ರವಿಕುಮಾರ್, ಶಾಂತಕುಮಾರ್, ಬೀರೇಗೌಡ, ಮಂಜುನಾಥ್, ಪ್ರದೀಪ್ ಈ ಪತ್ತೆ ಮಾಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement