ಅಡಿಗಡಿಗೆ ಸಂಚಾರ ದೀಪ ಅಳವಡಿಕೆ ಬೇಕೇ?
ಮಾ. ವೆಂಕಟೇಶ್
ಮೈಸೂರು: ನಗರದಲ್ಲಿ ಅವೈಜ್ಞಾನಿಕ ಸಂಚಾರ ದೀಪಗಳ ವ್ಯವಸ್ಥೆಯಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.
ನಗರ ಪೊಲೀಸ್ ಆಯುಕ್ತರಾಗಿ ಡಾ. ಎಂ.ಎ.ಸಲೀಂ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಆದ್ಯತೆಯಾಗಿ ಸಂಚಾರ ವ್ಯವಸ್ಥೆಗೆ ಗಮನ ಹರಿಸಿದ್ದಾರೆ. ಅಲ್ಲದೆ ಎಲ್ಲೆಂದರಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ ದಂಡ ಹಾಕಲು ಪೊಲೀಸರು ಮುಂದಾದಾಗ ಅದರಿಂದ ತಪ್ಪಿಸಿಕೊಳ್ಳುವ ಸಾಹಸಕ್ಕೆ ಪ್ರಯತ್ನಿಸಿ ಜೀವ ಹಾನಿಗೆ ಒಳಗಾದವರೂ ಇದ್ದಾರೆ. ಇಂತಹ ಅವಘಡಗಳಗೆ ಕಡಿವಾಣ ಹಾಕುವ ಸಲುವಾಗಿ ಹೊಸ ನಿಯಮ ಜಾರಿಗೊಳಿಸಿ, ಕ್ಯಾಮರಾ ಮೂಲಕ ಹೆಲ್ಮೆಟ್ ಧರಿಸದವರ ವಿರುದ್ಧ ನಡೆಸಿರುವ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಆದರೆ, ನಗರದ ವಿವಿಧ ಭಾಗಗಳಲ್ಲಿ ಅನಗತ್ಯ ವೃತ್ತಗಳಲ್ಲಿ ಸಂಚಾರ ದೀಪಗಳನ್ನು ಅಳವಡಿಸಿರುವುದು ಹಾಗೂ ಸಿಬ್ಬಂದಿ ಮೂಲಕ ಸಂಚಾರ ವ್ಯವಸ್ಥೆಗೆ ಕ್ರಮ ವಹಿಸಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಜೆಎಲ್ಬಿ ರಸ್ತೆ ರೋಟರಿ ಶಾಲೆ ಬಳಿಯ ವೃತ್ತಕ್ಕೆ ಸಂಚಾರ ದೀಪ ಅಳವಡಿಸಿರುವುದು. ಇದು ಎಷ್ಟು ಸರಿ ಎಂಬುದನ್ನು ಚಿಂತಿಸಬೇಕು.
ಇದೇ ಜೆಎಲ್ಬಿ ರಸ್ತೆಯಲ್ಲಿ ಸಿಕೆಸಿ ವೃತ್ತ, ರಾಮಸ್ವಾಮಿ ವೃತ್ತ, ಎಂಡಿಎ ವೃತ್ತ, ಎಂಜಿನಿಯರುಗಳ ಸಂಸ್ಥೆ ವೃತ್ತ, ದೇವರಾಜ ಅರಸು ರಸ್ತೆ ಕೂಡುವ ಮಹಾರಾಣಿ ಕಾಲೇಜು ವೃತ್ತ, ವಿನೋಬಾ ರಸ್ತೆ ಕೂಡುವ ಮೆಟ್ರೋಪೋಲ್ ವೃತ್ತ, ಧನ್ವಂತ್ರಿ ರಸ್ತೆ ಕೂಡುವ ವಾರ್ತಾಭವನದ ಮುಂಭಾಗದ ವೃತ್ತದಲ್ಲಿ ಸಂಚಾರ ದೀಪಗಳನ್ನು ಅಳವಡಿಸಲಾಗಿದೆ. ಇವುಗಳ ನಡುವೆ ಕನಿಷ್ಠ 500 ಮೀಟರ್ ಅಂತರವೂ ಇಲ್ಲ. ಒಂದು ಕಡೆ ಸಂಚಾರ ದೀಪದಲ್ಲಿ ನಿಂತು ತೆರಳುತ್ತಿದಂತೆ ಮತ್ತೊಂದು ಸಂಚಾರ ದೀಪ ಬರಲಿದೆ. ಇದರಿಂದಾಗಿ ಇಂಧನ ಹಾಗೂ ಸಮಯ ವ್ಯರ್ಥವಾಗಿ ರಾಷ್ಟ್ರೀಯ ನಷ್ಟವಾಗುತ್ತಿದೆ.
ಹಾಗೆಯೇ ವಿನೋಬರಸ್ತೆ ಹಾಗೂ ಡಿ. ಸುಬ್ಬಯ್ಯ ರಸ್ತೆ ಕೂಡುವ ನಂಜರಾಜ ಬಹದ್ದೂರ್ ಛತ್ರದ ಬಳಿ ಸಂಚಾರ ವ್ಯವಸ್ಥೆಗೆ ಸಿಬ್ಬಂದಿ ನೇಮಿಸಲಾಗಿದೆ. ಅಲ್ಲಿಯೂ ವಾಹನಗಳನ್ನು ತಡೆದು ಬಿಡಲಾಗುತ್ತಿದೆ. ಅಲ್ಲದೆ ಕೆಆರ್ಎಸ್ ರಸ್ತೆಯ ಕುಂಬಾರಕೊಪ್ಪಲು ಸುಜಾತ ಚಿತ್ರಮಂದಿರದ ಬಳಿಯ ಚೌಕಿಯಲ್ಲಿ ಸಿಬ್ಬಂದಿ ನೇಮಿಸಿ ವಾಹನ ತಡೆದು ಬಿಡುವ ಕೆಲಸ ನಡೆದಿದೆ. ಹೀಗೆ ಅನೇಕ ಕಡೆ ಅನಗತ್ಯ ಸಂಚಾರ ತಡೆಗಳು ವಾಹನ ಸವಾರರಿಗೆ ಪ್ರತಿಕೂಲ ಪರಿಣಾಮ ಬೀರಿದೆ.
ಬೇಡದ ಸ್ಥಳಗಳಲ್ಲಿ ಅನಗತ್ಯವಾಗಿ ಸಂಚಾರ ದೀಪಗಳನ್ನು ಅಳವಡಿಸುವುದು ಅಥವಾ ಸಿಬ್ಬಂದಿ ನೇಮಿಸಿ ಸಂಚಾರ ವ್ಯವಸ್ಥೆ ನಿಯಂತ್ರಿಸುವುದರಿಂದ ವಾಹನ ದಟ್ಟಣೆ ಹೆಚ್ಚಿದೆ. ಇದರಿಂದ ಆ ರಸ್ತೆಯಲ್ಲಿ ವಾಹನ ಚಾಲನೆಗೆ ಪ್ರಯಾಸ ಪಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಧನದ ಬೇಡಿಕೆ ಹಾಗೂ ಬೆಲೆ ಏರಿಕೆಯಾಗಿರುವ ಇಂಥ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಯನ್ನು ರೂಪಿಸುವಾಗ ಆಗಬಹುದಾದ ಇಂಧನ ನಷ್ಟದ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಬೇಕು.
ಸಂಚಾರ ದೀಪಗಳ ಬಳಿ ಅನ್ಯರಾಜ್ಯಗಳ ಅಲೆಮಾರಿ ಜನರು ಪತ್ರಿನಿತ್ಯ ವಿವಿಧ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ. ಅಲ್ಲದೆ ಕೆಲವರು ವಯೋವೃದ್ಧರು, ಮತ್ತೆ ಕೆಲವರು ಮಕ್ಕಳೊಂದಗೆ ಭಿಕ್ಷಾಟನೆಗೂ ತೊಡಗಿರುವುದು ಕಾಣಬಹುದು. ಪೊಲೀಸರ ಎದುರಿನಲ್ಲಿಯೇ ಭಿಕ್ಷಾಟನೆ ಮುಕ್ತ ನಗರದಲ್ಲಿ ಇಂತಹ ವೃತ್ತಿ ಹಾಗೂ ಮಾರಾಟ ದಂಧೆ ನಡೆದಿರುವುದಕ್ಕೆ ಕಡಿವಾಣ ಹಾಕದಿರುವುದು ಸಂಶಯ ಮೂಡಿಸಿದೆ.
ಟ್ರಾಫಿಕ್ ಎಂಜಿನಿಯರಿಂಗ್ ವೈಫಲ್ಯ
ಸುಗಮ ಸಂಚಾರ ಸೇವೆಗೆ ಟ್ರಾಫಿಕ್ ಎಂಜಿನಿಯರಿಂಗ್ ಅಳವಡಿಸಬೇಕು. ಆದರೆ ನಗರ ಸಂಚಾರ ಪೊಲೀಸರು ಈ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಜೆಎಲ್ಬಿ ರಸ್ತೆಯ 3 ಕಿ.ಮೀ ವ್ಯಾಪ್ತಿಯಲ್ಲಿ 11 ಸಿಗ್ನಲ್ ಅಳವಡಿಸಲಾಗಿದೆ. ಯಾದವಗಿರಿ ಆಕಾಶವಾಣಿ ವೃತ್ತದಲ್ಲಿ 6 ರಸ್ತೆಗಳು ಕೂಡಲಿದ್ದು, ಇಲ್ಲಿನ ಸಂಚಾರ ನಿಯಂತ್ರಣಕ್ಕೆ ಸಂಚಾರ ದೀಪ ಅಳವಡಿಸುವಂತೆ ಕೋರಿ 6 ತಿಂಗಳಾಗಿದ್ದರೂ ಸಂಚಾರ ದೀಪವಿರಲಿ ಒಬ್ಬ ಸಿಬ್ಬಂದಿ ನೇಮಿಸಿಲ್ಲ. ಅವೈಜ್ಞಾನಿಕ ಸಂಚಾರ ವ್ಯವಸ್ಥೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಎಂ.ಲಕ್ಷ್ಮಣ್, ಸಂಚಾಲಕ, ಎಸಿಐಸಿಎಂ