ಖಾತಾ ಆಂದೋಲನಕ್ಕೆ ಚಾಲನೆ
ರಾವಂದೂರು: ಯಾವುದೇ ರೈತರು ಅರ್ಜಿ ಹಿಡಿದು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಕಂದಾಯ ಇಲಾಖೆ ವತಿಯಿಂದ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ.ಕೆ.ಸವಿತಾ ಹೇಳಿದ್ದಾರೆ.
ಪಟ್ಟಣದ ಹೋಬಳಿಯ ಹಂಡಿತವಳ್ಳಿ ಗ್ರಾಪಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಖಾತೆದಾರರು ಮರಣ ಹೊಂದಿದ ನಂತರ ಅವರ ವಾರಸುದಾರರಿಗೆ ಖಾತೆ ನೀಡುವ ಉದ್ದೇಶದಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಖಾತೆದಾರರು ಪಹಣಿ, ಮರಣ ದೃಢೀಕರಣ ಪತ್ರ, ವಂಶವೃಕ್ಷ, ಮತ್ತು ಅರ್ಜಿಯನ್ನು ನೀಡಬೇಕು. ಈ ಗ್ರಾಪಂನಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ಇದ್ದು, ಅಂತವರು ಅಧಿಕೃತ ದಾಖಲೆ ಮತ್ತು ಅರ್ಜಿಯನ್ನು ಪಡೆದು ಇವರಿಗೆ ಖಾತೆ ನೀಡಲಾಗುವುದು ಎಂದು ತಿಳಿಸಿದರು.
ಜಂಟಿ ವಾರಸುದಾರರ ಪಾಲು ಪಾರಿಕತ್ತು ಅಥವಾ ವಿಭಾಗ ಪತ್ರಗಳನ್ನು ರಿಜಿಸ್ಟರ್ ಮಾಡಿಕೊಂಡು 11-ಇ ನಕ್ಷೆ ಪಡೆದು ನೀಡಬೇಕು. ಪ್ರತಿ ಸರ್ವೆ ನಂಬರಿಗೆ 35ರಂತೆ ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ ಕಚೇರಿಯ ವತಿಯಿಂದ ಪಹಣಿ ತಿದ್ದುಪಡಿ ಆಂದೋಲನ ಕೂಡ ನಡೆಸಲಾಗುತ್ತಿದೆ. ಫೆಬ್ರವರಿ ಕೊನೆವರೆಗೂ ಈ ಆಂದೋಲನ ಇದ್ದು ಪಂಚಾಯಿತಿವಾರು ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಪಹಣಿ ತಿದ್ದಿ ಗುರುತಿಸುವ ಕೆಲಸವನ್ನು ಕಂದಾಯ ಇಲಾಖೆ ಸರಿಪಡಿಸುತ್ತದೆ ಎಂದರು.
ಇದೇ ವೇಳೆ 50ಕ್ಕೂ ಹೆಚ್ಚು ಮಂದಿ ಖಾತೆಗಾಗಿ ಅರ್ಜಿ ಸಲ್ಲಿಸಿದರು. ಹಂಡಿತವಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಿಕೊಡುವಂತೆ ತಹಸೀಲ್ದಾರರಿಗೆ ಮನವಿ ಮಾಡಿದರು.
ಉಪ ತಹಸೀಲ್ದಾರ್ ಸಣ್ಣರಾಮಪ್ಪ, ಕಂದಾಯ ನಿರೀಕ್ಷಕ ಪುಟ್ಟಶೆಟ್ಟಿ, ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಪಿಡಿಒ ಮಹಾದೇವ್, ಗ್ರಾಮ ಲೆಕ್ಕಿಗರಾದ ಮೂರ್ತಿಕುಮಾರ್, ಮುಖ್ಯೋಪಾಧ್ಯಾಯಿನಿ ಬಿ.ಎಸ್. ಶಶಿಕಲಾ, ಕೋಟೆಗೌಡ ನಂದೀಶ್, ಪಾಂಡುಕುಮಾರ್, ಚನ್ನಬಸಪ್ಪ, ಶ್ರೀನಿವಾಸ್, ಬಸವಣ್ಣ ಇದ್ದರು.