ಚನ್ನಂಗೆರೆಗೆ ಕಾವೇರಿ ನೀರು
ಕೆ.ಆರ್. ನಗರ: ತಾಲೂಕಿನ ಚನ್ನಂಗೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ದೃಷ್ಟಿಯಿಂದ, ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಸರ್ಕಾರದಿಂದ 10 ಕೋಟಿಗಳ ಪ್ರಾಥಮಿಕ ಅನುಮೋದನೆ ದೊರೆತಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ತಾಲೂಕಿನ ಚುಂಚನಕಟ್ಟೆ ಹೋಬಳಿಯ ಬಂಡಳ್ಳಿ ಗ್ರಾಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ನಂತರ ಅಹವಾಲು ಸ್ವೀಕರಿಸಿ ಮಾತನಾಡಿ, ಈ ಯೋಜನೆಯಿಂದ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಳೂರು, ಬಂಡಳ್ಳಿ, ಚಿಕ್ಕಹನಸೋಗೆ, ಸಣ್ಣೇಗೌಡನಕೊಪ್ಪಲು, ಚನ್ನಂಗೆರೆ, ಎರೆಮನುಗನಹಳ್ಳಿ, ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ತಾರತಮ್ಯ ನಿವಾರಣೆ: ಮೈಸೂರು ಜಿಲ್ಲೆಯಲ್ಲಿ ಬೆಳೆಯುವ ಪ್ರತಿ ಒಂದು ಬ್ಯಾರನ್ ಲೈಸೆನ್ಸ್ 1,750 ಕೆಜಿ ತಂಬಾಕು ಬೆಳೆಯಲು ಅವಕಾಶವಿದ್ದು, ಹೊರ ರಾಜ್ಯದಲ್ಲಿ 2,250 ಕೆ.ಜಿ ಬೆಳೆಯಲು ಅನುಮತಿ ನೀಡಲಾಗಿದೆ. ಈ ತಾರತಮ್ಯವನ್ನು ನಿವಾರಣೆ ಮಾಡಲು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್ ಅವರೊಂದಿಗೆ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿದ ವೇಳೆ, ಹೊರ ರಾಜ್ಯದಲ್ಲಿ ತಂಬಾಕು ಬೆಳೆಯಲು ಅವಕಾಶ ಮಾಡಿಕೊಟ್ಟಿರುವ ಹಾಗೆ ಜಿಲ್ಲೆಯ ರೈತರಿಗೂ ಅವಕಾಶ ಮಾಡಿಕೊಡುವ ಜೊತೆಗೆ ಅನಧಿಕೃತವಾಗಿ ತಂಬಾಕು ಬೆಳೆದಿರುವ ರೈತರಿಗೆ ದಂಡ ಶುಲ್ಕವಿಲ್ಲದೆ ತಂಬಾಕು ಮಾರಾಟ ಮಾಡಲು ಅವಕಾಶ ಮಾಡಿಕೊಡುವುದಾಗಿ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಮಾಜಿ ಸದಸ್ಯ ಡಿ.ಎಸ್.ಜಗದೀಶ್, ತಾಪಂ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷೆ ಶಕುಂತಲಾ, ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ ನಿರ್ದೇಶಕ ಬಿ.ಆರ್.ಕುಚೇಲ, ತಾಪಂ ಮಾಜಿ ಸದಸ್ಯ ಶಿವಣ್ಣ, ಗ್ರಾಪಂ ಸದಸ್ಯ ಗುರುಮೂರ್ತಿ, ಮುಖಂಡರಾದ ಹಳಿಯೂರು ಕೃಷ್ಣಮೂರ್ತಿ, ಶಂಭುದೇವ, ನಾಗಣ್ಣ, ರಮೇಶ್, ಬಸವೇಗೌಡ, ಸುಂದರ್, ಉಪ ತಹಸೀಲ್ದಾರ್ ತಿಮ್ಮಯ್ಯ, ಗ್ರಾಮ ಲೆಕ್ಕಾಧಿಕಾರಿ ಬಸವನಾಯ್ಕ, ಪಿಡಿಒ ನಾಗೇಗೌಡ, ಜಿಪಂ ಎಂಜಿನಿಯರ್ ನಾಗೇಶ್, ನಿವೃತ್ತ ಶಿಕ್ಷಕ ಸಿ.ಟಿ.ಜಗದೀಶ್, ದಲಿತ ಮುಖಂಡ ಗುರುಮೂರ್ತಿ, ರಾಘವೇಂದ್ರ, ಎಚ್.ಪಿ.ರಾಜೇಶ್, ಎಚ್.ಡಿ.ಕೆ. ಭಾಸ್ಕರ್, ಧರ್ಮೇಶ್, ಈರಣ್ಣ ಇದ್ದರು.