ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜ್ಯಾತ್ಯತೀತ ಮನೋಭಾವ ಹೊಂದಿದ್ದ ಆದಿಶ್ರೀ

Rashmi Kasaragodu
Updated On : 22 Jan 2014, 1:32 am

ಹುಣಸೂರು: ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಜ್ಯಾತ್ಯತೀತ ಮನೋಭಾವ ಹೊಂದಿದ್ದವರು ಎಂದು ರಾಜ್ಯ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಒಕ್ಕಲಿಗರ ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಸನ್ನಿಧಿಗೆ ಭಕ್ತರ ನಮನ ಹಾಗೂ ಗುರುವಂದನಾ ಮತ್ತು ಚುನಾಯಿತ ಪ್ರತಿನಿಧಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲಗಂಗಾಧರನಾಥ ಸ್ವಾಮೀಜಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ಕ್ರಾಂತಿ ಮಾಡಿ ಅವಿಸ್ಮರಣೀಯ ಸೇವೆ ಮಾಡಿದ್ದಾರೆ. ಎಲ್ಲ ಜನಾಂಗದ ಬಡವರಿಗೂ ವಿದ್ಯಾದಾನ, ಆರೋಗ್ಯ ಸೇವೆ ಕಲ್ಪಿಸಿದ ಅವರೊಬ್ಬ ಯುಗಪುರುಷರು. ಇತ್ತೀಚೆಗೆ ಸಿದ್ದರಾಮಯ್ಯ ಅವರು ಸಹ ತಾವು ಮುಖ್ಯಮಂತ್ರಿಯಾಗಬೇಕೆಂದು ಬಾಲ ಗಂಗಾಧರನಾಥ ಸ್ವಾಮೀಜಿ ಆಶಿಸಿದ್ದರೆಂದು ಹೇಳಿದ್ದಾರೆ. ಇದು ಸ್ವಾಮೀಜಿ ಜಾತ್ಯತೀತ ಮನೋಭಾವಕ್ಕೆ ಸಾಕ್ಷಿ ಎಂದರು.
ದಾರಿದೀಪವಾಗಬೇಕಿದೆ: ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜ ಸೇವೆ, ವಿದ್ಯಾದಾನ, ಆರೋಗ್ಯ ಭಾಗ್ಯ, ಆದರ್ಶದ ಬದುಕು, ಜನ ಹಿತ ಕಾರ್ಯಕ್ರಮಗಳಿಂದ ಬಾಲಗಂಗಾಧರನಾಥ ಸ್ವಾಮೀಜಿ ವಿಶ್ವ ಮಾನ್ಯತೆ ಪಡೆದವರು. ಅವರ ಬದುಕು ನಮಗೆ ದಾರಿ ದೀಪವಾಗಬೇಕಿದೆ ಎಂದು ಹೇಳಿದರು.
ಶಿಕ್ಷಣವೇ ದೊಡ್ಡಶಕ್ತಿ. ಆದರೆ ಪ್ರಜ್ಞೆ ಇಲ್ಲದ ಶಿಕ್ಷಣ ಸಮಾಜಕ್ಕೆ ಮಾರಕವಾದದ್ದು. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ, ಪ್ರಜ್ಞೆ, ವಿವೇಕದ ವಿದ್ಯೆ ಕಲಿತಲ್ಲಿ ಸಮಾಜ, ದೇಶ ಜೊತೆಗೆ ತಾನೂ ಕೂಡ ಬೆಳೆಯುತ್ತಾನೆ. ಇಂದು ವಿದ್ಯೆ-ಹಣ ಎಲ್ಲವನ್ನೂ ಗಳಿಸಬಹುದು. ಪ್ರೀತಿ-ಕರುಣೆ ಇಲ್ಲದ ಹಣ-ವಿದ್ಯೆ ನಿಷ್ಪಲ. ಸಮಕಾಲಿನ ಜಗತ್ತಿನಲ್ಲಿ ಸಾಮಾಜಿಕ ಪ್ರಜ್ಞೆ ಇಲ್ಲದಿದ್ದಲ್ಲಿ ಆತ ಮನುಷ್ಯ ಎನಿಸಿಕೊಳ್ಳಲು ಅರ್ಹನಲ್ಲ. ದೇಶದ ಯುವಕರು ಸೋಮಾರಿಗಳಾಗದೆ ದುಡಿದಲ್ಲಿ ಮಾತ್ರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾದ್ಯ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣ ಕೊಡಿಸಲು ಆಗದ ಮಂದಿ ತಮ್ಮ ಮಕ್ಕಳನ್ನು ಮಠದ ಶಾಲೆಗೆ ಸೇರಿಸಿ ಸಂಪೂರ್ಣ ಜವಾಬ್ದಾರಿಯನ್ನು ಮಠವೇ ಹೊರಲಿದೆ. ಆದರೆ ಇಲ್ಲಿಗೆ ದಾಖಲಿಸುವವರು ದುಶ್ಚಟದಿಂದ ವಿಮುಖರಾದಲ್ಲಿ ಮಾತ್ರ ಅವಕಾಶ ಎಂದು ಹೇಳಿದರು.
ಶಾಸಕ ವಾಸು, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಸದಸ್ಯರಾದ ಸಿ.ಟಿ. ರಾಜಣ್ಣ, ಕೆ. ಲಲಿತಾ ದೇವೇಗೌಡ ಮಾತನಾಡಿದರು. ಇದೇ ವೇಳೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿ, ಸನ್ಮಾನಿಸಲಾಯಿತು. ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ನಗರಪಾಲಿಕೆ ಸದಸ್ಯ ಪ್ರಶಾಂತ್ಗೌಡ, ಮುಖಂಡರಾದ ಗಣೇಶಗೌಡ, ಬಾಲಕೃಷ್ಣ, ಸದಾನಂದ, ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಲಾರಿ ಸ್ವಾಮಿಗೌಡ, ಅಧ್ಯಕ್ಷ ಸೋಮಶೇಖರ್, ಪದಾಧಿಕಾರಿಗಳಾದ ತುಳಸಿರಾಂ, ರುದ್ರೆಗೌಡ, ಪ್ರಸನ್ನ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement