ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾರತಮ್ಯದಿಂದ ಸಮಾನ ಶಿಕ್ಷಣ ಅಸಾಧ್ಯ

Rashmi Kasaragodu
Updated On : 22 Jan 2014, 1:33 am

ಮೈಸೂರು: ಸಮಾನ ಶಿಕ್ಷಣ ಬರಬೇಕಾದರೆ ಅದರೊಳಗಿನ ತಾರತಮ್ಯ ತೊಲಗಬೇಕು ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.
ರಂಗಾಯಣದ ಶ್ರೀರಂಗದಲ್ಲಿ ಬಳ್ಳಾರಿಯ ಲೋಹಿಯಾ ಪ್ರಕಾಶನ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಂಗನಾಥ ಕಂಟನಕುಂಟೆ ಅವರ ಸೇನೆಯಿಲ್ಲದ ಕದನ ಎಂಬ ಭಾಷೆ, ಸಮಾಜ ಮತ್ತು ಪ್ರಭುತ್ವಗಳ ನಂಟು ಕುರಿತಾದ ಲೇಖನಗಳ ಸಂಗ್ರಹದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇಂದು ಪಂಚರ್ವಮದ ಶಿಕ್ಷಣ ಅನುಷ್ಠಾನದಲ್ಲಿದೆ. ಬಡವರ ಮಕ್ಕಳು, ಗ್ರಾಮೀಣ ಮಕ್ಕಳು, ಐಟಿ ಬಿಟಿ ಮಕ್ಕಳು, ಆ ಮಾಧ್ಯಮ ಹಾಗೂ ಇ ಮಾಧ್ಯಮ ಎಂಬ ತಾರತಮ್ಯ ಮಾಡಲಾಗುತ್ತಿದ್ದು, ಇದರಿಂದಾಗಿ ದುಡಿಯುವ ವರ್ಗದವರ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಮಾನ ಶಿಕ್ಷಣ ಜಾರಿ ಹಾಗೂ ಸಮೀಪ ಶಾಲೆಯ ಪರಿಕಲ್ಪನೆಯೊಂದೇ ಇದಕ್ಕೆ ಪರಿಹಾರ ಎಂದರು.
ಸರ್ಕಾರಿ ಶಾಲೆಯ ಶಿಕ್ಷಣದ ವ್ಯವಸ್ಥೆ ಕುಸಿದಿದೆ ಎಂಬ ಮಾತುಗಳಿವೆ. ಈ ಹಿಂದೆ ಒಂದೇ ಶಾಲೆಯಲ್ಲಿ ಎಲ್ಲ ವರ್ಗದ ಜನರ ಮಕ್ಕಳು ಓದುತ್ತಿದ್ದರು. ಆದರೆ ಇಂದು ಅಂಥ ಸನ್ನಿವೇಶ ಕಾಣದಾಗಿದೆ. ಭಾರತದಲ್ಲಿ ಎಲ್ಲ ಜಾತಿ, ವರ್ಗಗಳ ಮಕ್ಕಳು ಸೇರಿ ಶಾಲೆಯಲ್ಲಿ ಕಲಿಯುವುದೇ ದೊಡ್ಡ ಶಿಕ್ಷಣ. ಎಲ್ಲರೊಂದಿಗೂ ಬೆರೆಯುವ ಹಾಗೂ ಒಡನಾಟ ಹೊಂದುವುದನ್ನು ಮಕ್ಕಳಿಗೆ ಕಲಿಸಬೇಕು ಎಂದರು.
ಸಂಘಟನೆಗಳು ಘೋಷಿಸಲಿ: ಕನ್ನಡ ಮಾಧ್ಯಮ ವಿಚಾರ ಕುರಿತಾಗಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಿದೆ.   ನಮ್ಮ ಪರವಾಗಿ ತೀರ್ಪು ಬರಲಿ ಎಂದು ಆಶಿಸೋಣ. ಒಂದು ವೇಳೆ ವ್ಯತಿರಿಕ್ತವಾದರೆ ನಾವೇನು ಮಾಡಬೇಕು ಎಂಬುದನ್ನು ಚಿಂತಿಸುವ ಅಗತ್ಯವಿದೆ. ತೀರ್ಪು ಪ್ರಕಟವಾದ ದಿನವೇ ಕನ್ನಡಪರ ಸಂಘಸಂಸ್ಥೆಗಳು ಸೋತ ದಿನಾಚರಣೆ ಘೋಷಿಸಬೇಕು. ನಮ್ಮ ಬೇಡಿಕೆ ಈಡೇರುವವರಿಗೂ ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಸಮ್ಮೇಳನ ನಡೆಸುವುದಿಲ್ಲವೆಂದು ನಿರ್ಧರಿಸಬೇಕು. ಕನ್ನಡಪರ ಸಂಘಟನೆಗಳು ಯಾವುದೇ ಕಾರ್ಯಕ್ರಮ, ಸನ್ಮಾನ ಹಾಗೂ ಸಂಭ್ರಮದ ಸಮಾರಂಭ ಮಾಡುವುದಿಲ್ಲ. ಸರ್ಕಾರಿ ಕಾರ್ಯಕ್ರಮಗಳಿಗೆ ಕಪ್ಪು ಪಟ್ಟಿ ಧರಿಸಿ ಭಾಗವಹಿಸುವುದಾಗಿ ಘೋಷಿಸಬೇಕು ಎಂದು ಅವರ ಸಲಹೆ ನೀಡಿದರು.
ಕೃತಿ ಕುರಿತು ಮೈಸೂರು ವಿವಿ ಪ್ರಸಾರಾಂಗದ ಉಪನಿರ್ದೇಶಕ ಸ.ರ. ಸುದರ್ಶನ್ ಮಾತನಾಡಿದರು. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಮುಖ್ಯ ಅತಿಥಿಯಾಗಿದ್ದರು. ಸಮಾಜವಾದಿ ಚಿಂತಕ ಪ. ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಪ್ರಾಸ್ತಾವಿಕ ಮಾತುಗಳಾಡಿದರು. ಲೇಖಕ ರಂಗನಾಥ ಕಂಟನಕುಂಟೆ ಇದ್ದರು.


ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು ಕನ್ನಡದ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಸಿದಂತೆಯಾದರೂ, ಇಂದಿನ ಪರಿಸ್ಥಿತಿ ಕನ್ನಡದ ಹೊಟ್ಟೆಗೆ ಹಿಟ್ಟಿಲ್ಲದಂತಾಗಿದೆ. ನಮ್ಮ ತಾಯಿ ಯಾರೆಂದು ನಿರ್ಧರಿಸಲು ನ್ಯಾಯಾಲಯದ ಮುಂದೆ ನಾವು ಅರ್ಜಿ ಸಲ್ಲಿಸಬೇಕಾದುದು ದುರಂತದ ಸಂಗತಿ. ಕನ್ನಡ ಮಾಧ್ಯಮ ಕುರಿತಾದ ವಿಷಯದಲ್ಲಿ ನಮ್ಮ ಜನಮಾನಸದಲ್ಲೂ ಆಸಕ್ತಿ ಇದೆಯೇ ಎಂಬ ಅನುಮಾನ ಮೂಡಿಸಿದೆ. ನಾವಿನ್ನೂ ಗುಲಾಮಗಿರಿಯ ಛಾಯೆಯಿಂದ ಬಿಡಿಸಿಕೊಂಡಿಲ್ಲ. ತನ್ನ ನಿರ್ಧಾರ ಅನುಷ್ಠಾನಗೊಳಿಸುವ ತಾಕತ್ತು ಸರ್ಕಾರದಿಂದಲೂ ಕಾಣದಾಗಿದೆ.
 ದೇವನೂರು ಮಹಾದೇವ, ಸಾಹಿತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement