ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಸ್ತ್ರ ಚಿಕಿತ್ಸೆ ಇಲ್ಲದೆ ಗ್ರಂಥಿಗೆ ಸ್ಟೆಂಟ್ ಅಳವಡಿಕೆ

Rashmi Kasaragodu
Updated On : 22 Jan 2014, 1:31 am

ಮೈಸೂರು: ಜ್ವರ, ಕಾಮಾಲೆ ರೋಗದಿಂದ ಬಳಲುತ್ತಿದ್ದ 57 ವರ್ಷದ ವ್ಯಕ್ತಿಯೊಬ್ಬರ ಮೇದೋಜೀರಕ ಗ್ರಂಥಿಯಲ್ಲಿ ಕೆಲವು ಅಂಗಾಂಶಗಳು ಸತ್ತಿದ್ದರಿಂದ ಮೈಸೂರಿನ ವಿಕ್ರಂ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ಇಲ್ಲದೆಯೇ ಸತ್ತಿರುವ ಅಂಗಾಂಶಗಳಲ್ಲಿನ ಕೀವನ್ನು ಹೊರ ತೆಗೆದಿದ್ದಾರೆ.
ಸತ್ತ ಅಂಗಾಂಶಗಳಲ್ಲಿ ತುಂಬಿದ್ದ ಕೀವಿನಿಂದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಈ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಒಂದೇ ಮಾರ್ಗವಾಗಿತ್ತು.
ಈ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಒಂದರಿಂದ ಎರಡು ತಿಂಗಳು ಇರಬೇಕಾಗಿದ್ದು, ಒಂದರ ನಂತರ ಒಂದು ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ಪ್ರಥಮ ಬಾರಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಎಂಡೋಸ್ಕೋಪಿ ಮೂಲಕ ಮೇದೋಜೀರಕ ಗ್ರಂಥಿಗೆ ಸ್ಟಂಟ್ ಅಳವಡಿಸಿ ಯಶಸ್ವಿಯಾಗಿದ್ದೇವೆ ಎಂದು ವೈದ್ಯ ತಂಡದ ನೇತೃತ್ವ ವಹಿಸಿದ್ದ ಡಾ. ರಾಜಕುಮಾರ್ ಪಿ.ವಾದ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ವಿಧಾನದಿಂದ ರೋಗಿಗೆ ಅರವಳಿಕೆ ಕೊಟ್ಟು ಚಿಕ್ಕ ಕೊಳವೆ ಹಾಕಿ, ನಾಳದ ಮೂಲಕ ಬಾಯಿಯಿಂದ ಹೊಟ್ಟೆಯೊಳಗೆ ತೂರಿಸಿ, ಒಂದು ಚಿಕ್ಕ ರಂಧ್ರ ಮಾಡಿ ಮೇದೋಜೀರಕ ಗ್ರಂಥಿಯ ಮಧ್ಯ ಸ್ಟಂಟ್ ಅನ್ನು ಕೂಡಿಸಲಾಗುತ್ತದೆ.
ಕೆಲವು ದಿನಗಳ ನಂತರ ಸತ್ತ ಜೀವಾಣುಗಳನ್ನು ಹೊರ ತೆಗೆಯಲಾಗುತ್ತದೆ. ಇದು ಮುಗಿದ ಬಳಿಕ ರೋಗಿಯು ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು. ಇದಕ್ಕೆ ತಗಲುವ ವೆಚ್ಚ 45 ಸಾವಿರ ಎಂದು ಅವರು ಮಾಹಿತಿ ನೀಡಿದರು.
ವೈದ್ಯರಾದ ಡಾ. ಸಾಗರ್ ಅಡ್ಕರ್, ಡಾ. ಶ್ರೀಧರ್, ಡಾ. ರುಬೇನ್ ಪ್ರಕಾಶ್, ಡಾ. ಮಹದೇವ್, ಡಾ. ಅನಿಲ್ಕುಮಾರ್ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement