ಅತ್ಯಾಚಾರ; ಚಿಕ್ಕಪ್ಪನ ಬಂಧನ
ಮೈಸೂರು: ಹನ್ನೆರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಚಿಕ್ಕಪ್ಪನನ್ನು ಉದಯಗಿರಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಉದಯಗಿರಿಯ ಗೌಸಿಯಾನಗರ ನಿವಾಸಿ ಬಾಬು ಎಂಬವರ ಪುತ್ರ ಅಮ್ಮುಖಾನ್ ಅ. ಸಮೀರ್ ಖಾನ್(28) ಬಂಧಿತ ಆರೋಪಿ. ಈತನಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಅಮ್ಮುಖಾನ್ ಸಹೋದರ ಕ್ಯಾತಮಾರನಹಳ್ಳಿಯಲ್ಲಿ ವಾಸವಾಗಿದ್ದು, ಜ.11ರಂದು ಪತ್ನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ. ರಾತ್ರಿ ಮನೆಯಲ್ಲಿ ಒಬ್ಬಳೆ ಇದ್ದ ಸಹೋದರನ ಪುತ್ರಿ ಮೇಲೆ ಅಮ್ಮುಖಾನ್ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಅಮ್ಮುಖಾನ್ನನ್ನು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಡಕಾಯಿತಿ
ಮೈಸೂರು: ಬಲಮುರಿ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳನ್ನು 9 ಜನರಿದ್ದ ತಂಡವೊಂದು ಅಡ್ಡಗಟ್ಟಿ 4 ಮೊಬೈಲ್, 14,800 ರು. ದೋಚಿರುವ ಘಟನೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳಾದ ಅಂಕಿತ್, ಸುಮಂತ್, ಅಕ್ಷಯ್ ಪೈ ಮತ್ತು ನಿಖಿಲ್ ಎಂಬವರು ಎರಡು ಬೈಕಿನಲ್ಲಿ ಬಲಮುರಿಗೆ ತೆರಳುತ್ತಿದ್ದರು. ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೋಗುತ್ತಿದ್ದಾಗ ಮೂರು ಬೈಕಿನಲ್ಲಿ ಬಂದ 9 ಮಂದಿ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ದೋಚಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ವಿವೇಕಾನಂದ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಲ್ಯಾಣಗಿರಿ; ಪೆಟ್ಟಿಗೆ ಅಂಗಡಿಗಳ ತೆರವು
ಮೈಸೂರು: ಕಲ್ಯಾಣಗಿರಿಯ ರಾಜಕುಮಾರ್ ರಸ್ತೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ 34 ಪೆಟ್ಟಿ ಅಂಗಡಿಗಳನ್ನು ನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ಪಾಲಿಕೆ ಸಹಾಯಕ ಆಯುಕ್ತ ರವಿಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರಸ್ತೆ ಬದಿ ಹಾಕಲಾಗಿದ್ದ ಬೀಡಿ, ದಿನಸಿ ಅಂಗಡಿಗಳಿದ್ದ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಿದರು. ಇದನ್ನು ಕಂಡು 10ಕ್ಕೂ ಹೆಚ್ಚು ಪೆಟ್ಟಿ ಅಂಗಡಿಯವರು ಸ್ವಯಂಪ್ರೇರಿತರಾಗಿ ತಮ್ಮ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಿದರು. ಪಾಲಿಕೆಯ ಕಿರಿಯ ಎಂಜಿನಿಯರ್ ಎಸ್.ಎಸ್. ಆರಾಧ್ಯ ಇದ್ದರು.
ಪ್ರತ್ಯೇಕ ಘಟನೆ; ಎರಡು ಮೇಕೆ ಕೊಂದ ಚಿರತೆ
ಹುಣಸೂರು: ಎರಡು ಪ್ರತ್ಯೇಕ ಚಿರತೆಗಳ ದಾಳಿಗೆ ಎರಡು ಮೇಕೆಗಳು ಬಲಿಯಾಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಲ್ಲಿ ಜರುಗಿದೆ. ಹನಗೋಡು ಹೋಬಳಿಗೆ ಸೇರಿದ ಕೆ.ಜಿ. ಹಬ್ಬನಕುಪ್ಪೆಯ ಎಂ.ಕೆ. ಮೊಣ್ಣಪ್ಪ ಹಾಗೂ ದೊಡ್ಡ ಹೆಜ್ಜೂರು ಬಳಿಯ ಹನುಮಂತಪುರ ಗ್ರಾಮದ ಶಿವಪ್ಪರಿಗೆ ಸೇರಿದ ತಲಾ ಒಂದು ಮೇಕೆಗಳನ್ನು ತಿಂದು ಹಾಕಿವೆ. ಎರಡು ಕಡೆಯು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ವೇಳೆ ಚಿರತೆಗಳು ದಾಳಿ ನಡೆಸಿ ಕೊಂದು ಹಾಕಿವೆ. ಕಳೆದ ಮೂರು ತಿಂಗಳಿಂದೀಚೆಗೆ ಮೊಣಪ್ಪರಿಗೆ ಸೇರಿದ ಒಟ್ಟು ಏಳು ಆಡುಗಳನ್ನು ತಿಂದು ಹಾಕಿವೆ. ಸ್ಥಳಕ್ಕೆ ವನಪಾಲಕ ರಶೀದ್, ಶಿವಶಂಕರ್ ಭೇಟಿ ನೀಡಿ ಪರಿಶಿಲಿಸಿದರು.
ಬೋನ್ ಇಡಲು ಮನವಿ: ಎರಡು ಕಡೆಯು ಚಿರತೆ ದಾಳಿಯಿಂದ ಈ ಭಾಗಗಳಲ್ಲಿ ಹಲವಾರು ಜಾನುವಾರುಗಳು ಬಲಿಯಾಗಿದ್ದು, ತಕ್ಷಣವೇ ಬೋನ್ ಇಟ್ಟು ಚಿರತೆಗಳನ್ನು ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.