'ಅಧಿಕಾರಿಗಳಲ್ಲಿ ಕುಗ್ಗುತ್ತಿರುವ ಪ್ರಾಮಾಣಿಕತೆ'
ಪಿರಿಯಾಪಟ್ಟಣ: ಅಧಿಕಾರಿ ವರ್ಗದಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದ್ದು, ಅಪರೂಪಕ್ಕೆ ಎಂಬಂತೆ ಕೆಲವು ಅಧಿಕಾರಿಗಳು ಮಾತ್ರ ಪ್ರಾಮಾಣಿಕತೆಗೆ ಉದಾಹರಣೆಯಾಗಿ ಕಾಣಿಸುತ್ತಿದ್ದಾರೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಯ ಅಧೀಕ್ಷಕ ಮಂಜುರಾಜ್ ಅವರನ್ನು ಕೇಂದ್ರ ತಂಬಾಕು ಮಂಡಳಿ ಉತ್ತಮ ಹರಾಜು ಅಧೀಕ್ಷಕ ಎಂದು ಘೋಷಿಸಿರುವ ಹಿನ್ನೆಲೆ ಮಾರುಕಟ್ಟೆಯ ಆವರಣದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ತಂಬಾಕು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಉತ್ತಮ ಸೇವೆ ನೀಡುತ್ತಿರುವ ಮಂಜುರಾಜ್ ಅವರು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ರೈತರನ್ನು, ಅಧಿಕಾರಿಗಳನ್ನು, ಖರೀದಿದಾರರನ್ನು ಹಾಗೂ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಜನ್ಯಯುತವಾಗಿ ಕೆಲಸ ನಿರ್ವಹಿಸುತ್ತಿರುವ ಮಂಜುರಾಜ್ ಅವರಂತಹ ಅಧಿಕಾರಿಗಳ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ತಂಬಾಕು ಹಾರಾಜು ಮಂಡಳಿಯ ಅಧಿಕಾರಿಗಳು ಹಾಗೂ ರೈತರು ಇದ್ದರು.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಶಿವಣ್ಣೇಗೌಡ
ಪಿರಿಯಾಪಟ್ಟಣ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಜವನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜೆ.ಕೆ. ಶಿವಣ್ಣೇಗೌಡ ಹೇಳಿದರು.
ತಾಲೂಕಿನ ಜವನಿಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮಹಾವೀರ್ ಜೈನ್ ಕಣ್ಣಿನ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯತೆ ವಹಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅನಾರೋಗ್ಯ ಕೇವಲ ದೇಹಕ್ಕೆ ಮಾತ್ರ ತೊಂದರೆ ನೀಡದೆ ಆರ್ಥಿಕ ಪರಿಸ್ಥಿತಿಯ ಮೇಲೂ ಹೊಡೆತ ಬೀಳುತ್ತದೆ ಎಂದು ತಿಳಿಸಿದರು.
ನೇತ್ರ ಪರೀಕ್ಷಕ ಹರೀಶ್ ಮಾತನಾಡಿ, ಆರೋಗ್ಯ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ನಡೆಸುತ್ತಿರುವುದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು. ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ಸಂಘದ ನಿರ್ದೇಶಕರಾದ ಮಾದೇಗೌಡ, ಶ್ರೀನಿವಾಸ್, ಪುಟ್ಟರಾಜು, ಎಂ.ಬಿ. ತಮ್ಮೇಗೌಡ, ರೇವಮ್ಮ, ಶಿವಪ್ಪ, ಒಕ್ಕಲಿಗರ ಯುವ ವೇದಿಕೆ ತಾಲೂಕು ಕಾರ್ಯಾಧ್ಯಕ್ಷ ಜಿ.ಪಿ. ಕುಮಾರ್ ಇದ್ದರು.