ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯಕ್ಕೆ ಒತ್ತಾಯ
ಮೈಸೂರು: ಏಕಲವ್ಯ ನಗರದ ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಎಚ್ಚರಿಸಿದೆ.
ಕೊಳಚೆ ನಿರ್ಮೂಲನೆ ಮಂಡಳಿಯಿಂದ ಏಕಲವ್ಯ ನಗರದಲ್ಲಿ ಬಹುಮಡಿ ವಸತಿ ಕಟ್ಟಡ ನಿರ್ಮಿಸುವ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಕಳೆದ ಬೇಸಿಗೆಯಲ್ಲಿ ಗುಡಿಸಲಿಗೆ ಬೆಂಕಿ ಬಿದ್ದು ಅನಾಹುತ ಸಂಭವಿಸಿತ್ತು. ಈಗ ಮತ್ತೆ ಬೇಸಿಗೆ ಬರುತ್ತಿದೆ. ಮುಂದೆ ಅನಾಹುತವಾದರೆ ಅದಕ್ಕೆ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಜಿಲ್ಲಾಡಳಿತವೆ ನೇರ ಹೊಣೆ ಆಗಬೇಕಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಪಿ. ವಾಸು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಸತಿ ನಿರ್ಮಾಣ ಕಾಮಗಾರಿಯು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಂಠಿತವಾಗಿದೆ. ಆದ್ದರಿಂದ ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಏಕಲವ್ಯ ನಗರದ ಶಾಲಾ ಮಕ್ಕಳಿಗಾಗಿ ನಗರ ಬಸ್ ನಿಲ್ದಾಣದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ಸಹ ಬರುತ್ತಿಲ್ಲ. ಆದ್ದರಿಂದ ಏಕಲವ್ಯ ನಗರಕ್ಕೆ ಬಸ್ ಸೌಲಭ್ಯ ಮತ್ತು ಮೂಲ ಸೌಲಭ್ಯ ಕಲ್ಪಿಸಬೇಕು. ತಪ್ಪಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಗವಿರಂಗಪ್ಪ, ಪ್ರಧಾನ ಕಾರ್ಯದರ್ಶಿ ರೇವಣ್ಣ, ಪಿ. ನಾರಾಯಣ್ ಇದ್ದರು.