ಆಸಕ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ: ಪ್ರೊ. ಕೃಷ್ಣನ್
ಮೈಸೂರು: ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಸಾಧನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎ.ಜಿ. ಕೃಷ್ಣನ್ ಹೇಳಿದರು.
ಚಿನ್ಮಯ ವಿದ್ಯಾಲಯ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಿಮ್ಮ ಆಸಕ್ತ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಸಾಧನೆ ಮಾಡಬಹುದು. ಕುತೂಹಲಕ್ಕೆ ಅಥವಾ ಒತ್ತಡಕ್ಕೆ ಒಳಪಟ್ಟು ಇಷ್ಟವಿಲ್ಲದ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಬಾರದು ಎಂದರು.
ಸಂಸ್ಥೆ ಚೇರ್ಮನ್ ಎಚ್.ಎನ್. ರಾಮತೀರ್ಥ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪೆನ್ಸಿಲ್ ಇದ್ದಂತೆ. ಹೆಚ್ಚು ಶ್ರಮವಹಿಸಿ ವ್ಯಾಸಂಗದಲ್ಲಿ ತೊಡಗಬೇಕು. ಆಗ ಮಾತ್ರ ಪೆನ್ಸಿಲ್ನಂತೆ ಮೊನಚಾಗಲು ಸಾಧ್ಯ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಂಸ್ಥೆ ಅಧ್ಯಕ್ಷೆ ರಮಾದೇವಿ ರಾಮತೀರ್ಥ ಅವರು ಚಿನ್ಮಯಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಎಂ.ಸ್. ಶಾರದಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿದರು. ಸಹ ಸಂಯೋಜಕಿ ಸಜಾತ ಜಯರಾಂ ವಾರ್ಷಿಕ ವರದಿ ಬಿಡುಗಡೆಗೊಳಿಸಿದರು. ಪ್ರಾಂಶುಪಾಲೆ ಕೆ. ಮಂಗಲ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರಾಧಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್. ಮಂಜುಳಾ ಇದ್ದರು.