ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ಸಿನ ಶೇ.80ರಷ್ಟು ಮಂದಿ ಮೌಢ್ಯ ಆಚರಿಸುತ್ತಾರೆ: ಕಾಳೇಗೌಡ

Rashmi Kasaragodu
Updated On : 23 Jan 2014, 1:40 am

ಮೈಸೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರೇ ಅಲ್ಲ ಕಾಂಗ್ರೆಸ್ಸಿನ ಶೇ.80ರಷ್ಟು ಮಂದಿ ಮೌಢ್ಯ ಆಚರಿಸುತ್ತಾರೆ. ಇವರಲ್ಲಿ ಸಂಸದ ಎಚ್. ವಿಶ್ವನಾಥ್ ಕೂಡ ಒಬ್ಬರು ಎಂದು ಪ್ರಗತಿಪರ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಹರಿಹಾಯ್ದರು.
ಬುಧವಾರ ಕಲಾಮಂದಿರದ ಮನೆಯಂಗಳದಲ್ಲಿ ನಡೆದ ಸಮಾರಂಭದಲ್ಲಿ 'ಬಾರುಕೋಲು' ಕನ್ನಡ ಪಾಕ್ಷಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಷ್ಟೋ ಮಂದಿ ತತ್ವ ಬೋಧಿಸುತ್ತಾರೆ. ಆದರೆ, ವಾಸ್ತವದಲ್ಲಿ ಮೌಢ್ಯ ಆಚರಿಗಳಾಗಿರುತ್ತಾರೆ. ಜೆಡಿಎಸ್ ಕಚೇರಿ ಆಸ್ತಿ ವಿಚಾರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪು ಬರುವುದಕ್ಕೆ ಮುನ್ನವೇ ಜ್ಯೋತಿಷಿಯೊಬ್ಬರು ಕಟ್ಟಡದ ವಾಸ್ತು ಸರಿಯಿಲ್ಲ ಎಂದಿದ್ದರೆ ದೇವೇಗೌಡರೇ ಸ್ವಯಂ ಪ್ರೇರಿತರಾಗಿ ನೀಡುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಯಾರೂ ಸಹ ತಾವು ಶ್ರಮಜೀವಿಗಳ ಋಣಿಗಳು ಎಂದು ಭಾವಿಸುವುದಿಲ್ಲ. ಈ ಸಂಪತ್ತು ಒಬ್ಬರಿಗೆ ಸೀಮಿತವಾದುದ್ದಲ್ಲ. ಕೆಲವರು ತಮ್ಮದೆಂದು ಶ್ರಮಜೀವಿಗಳ ರಕ್ತ ಹೀರುತ್ತಿದ್ದಾರೆ. ಇಂತಹ ಅನ್ಯಾಯವನ್ನು ಸಹಿಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಅಪಚಾರ. 'ಬಾರುಕೋಲು' ಪತ್ರಿಕೆ ಅನ್ಯಾಯದ ವಿರುದ್ಧ ಚಳವಳಿ ರೂಪಿಸಬೇಕು. ಅಧಿಕಾರ ನಡೆಸುವ ಸರ್ಕಾರ ರೈತರ ಕಣ್ಣೀರಿಗೆ ಬೆಲೆ ನೀಡುತ್ತಿಲ್ಲ ಎಂದರು.
ಭಾರತ ವಿಕಾರ ರಾಷ್ಟ್ರ. ಜಾತಿ, ಅಸ್ಪೃಶ್ಯತೆ, ಲಿಂಗ ಭೇದ ಮನೆ ಮಾಡಿದೆ. ಎಷ್ಟೋ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದರೆ, ಮತ್ತೊಂದೆಡೆ ಆಹಾರ ಪದಾರ್ಥ ಕೊಳೆತು ನಾರುತ್ತಿದೆ. ಎಷ್ಟೋ ಬಾರಿ ನ್ಯಾಯಾಲಯ ಛೀಮಾರಿ ಹಾಕಿದ ಬಳಿಕ ಸರ್ಕಾರ ಎಚ್ಚೆತ್ತು ಮಧ್ಯಾಹ್ನದ ಬಿಸಿಯೂಟ ಜಾರಿಗೆ ತಂದಿತು. ಅಲ್ಲಿಯವರೆಗೂ ಯಾರಿಗೂ ಜ್ಞಾನೋದಯವಾಗಿರಲಿಲ್ಲ. ಈ ಬಗ್ಗೆ ಜನರಿಗೆ ವೈಚಾರಿಕ ಪ್ರಜ್ಞೆ ಬೆಳೆಸಿ ಅನ್ಯಾಯದ ವಿರುದ್ಧ ಸಿಡೆದೇಳುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.
ಜಾತಿ ವಿನಾಶ ವೇದಿಕೆಯ ಅಧ್ಯಕ್ಷ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕ ಅಂಜನಾಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪತ್ರಿಕೆ ಸಂಪಾದಕ ಬಿ.ಆರ್. ರಂಗಸ್ವಾಮಿ, ಸಂಶೋಧಕಿ ಪದ್ಮಶ್ರೀ ಇದ್ದರು. ವಕೀಲ ಜೀರಹಳ್ಳಿ ರಮೇಶ್ಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಚೌಡಹಳ್ಳಿ ಶಿವಣ್ಣ ಪ್ರಾರ್ಥಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement