ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟೀಕಾಕಾರರಿಗೆ ಕೆಲಸಗಳಿಂದಲೇ ಉತ್ತರ

Rashmi Kasaragodu
Updated On : 23 Jan 2014, 1:39 am

ಕೆ.ಆರ್. ನಗರ: ನನಗೆ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟರೆ ರಾಜಕೀಯ ಮಾಡಲು ಬರುವುದಿಲ್ಲ. ಆದ್ದರಿಂದ ನನ್ನ ವಿರುದ್ಧ ಮಾತನಾಡುವವರಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ನೀಡುತ್ತೇನೆ ಎಂದು ಸಂಸದೆ ರಮ್ಯಾ ಹೇಳಿದರು.
ತಾಲೂಕಿನ ಲಾಳನಹಳ್ಳಿ ಗ್ರಾಮದಲ್ಲಿ ಬುಧವಾರ ಮತದಾರರಿಗೆ ಅಭಿನಂದನೆ ಸಲ್ಲಿಸಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಮಾತನಾಡಿದ ಅವರು, ಮತದಾರರಿಗೆ ಮೂಲ ಸವಲತ್ತು ಕಲ್ಪಿಸಬೇಕಾದುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ. ಜನರು ನೀಡಿರುವ ಅಧಿಕಾರವನ್ನು ಅವರ ಸೇವೆಗೆ ಬಳಸುತ್ತೇನೆ ಎಂದು ತಿಳಿಸಿದರು.
ಕ್ಷೇತ್ರದ ಮತದಾರರ ನಂಬಿಕೆ ಹುಸಿ ಮಾಡದೆ ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಅಭಿಲಾಷೆ ಹೊಂದಿದ್ದು, ಈಗಾಗಲೇ ಕೆ.ಆರ್. ನಗರ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿಂತೆ ಅಧಿಕಾರಿಗಳ ಜತೆ ಚರ್ಚಿಸಿದ್ದು, ಕುಡಿಯುವ ನೀರು, ರಸ್ತೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅಗತ್ಯ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ದೇಶದ ಏಳಿಗೆಗೆ ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡಬೇಕು. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದ ಸಮಯದಲ್ಲಿ ಯುವ ಜನತೆ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಸವಲತ್ತುಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವುದರ ಜತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಹಾಗೂ ಅವುಗಳ ಸದುಪಯೋಗಗಳ ಬಗ್ಗೆ ತಿಳಿಸಿ, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವ ಹಂಬಲವಿದ್ದು, ನನ್ನ ಬೆಂಬಲಿಸಿ ಎಂದು ಮನವಿ ಮಾಡಿದರು.
ನೂಕುನೂಗ್ಗಲು: ಜನಪ್ರಿಯ ಚಿತ್ರ ನಟಿಯು ಆಗಿರುವ ಸಂಸದೆ ರಮ್ಯಾ ಗ್ರಾಮಗಳಿಗೆ ಭೇಟಿ ನೀಡಿದಾಗ ಅವರನ್ನು ನೋಡಲು ಫೋಟೋ ತೆಗೆಸಿಕೊಳ್ಳಲು ಸಾರ್ವಜನಿಕರು ಮುಗಿಬಿದ್ದರಲ್ಲದೆ, ಲಾಳನಹಳ್ಳಿ ಗ್ರಾಮದಲ್ಲಿ ಶಾಲೆಯ ಮಕ್ಕಳು ಶಿಕ್ಷಕರ ಕಣ್ತಪ್ಪಿಸಿ ಬಂದಿದ್ದರು. ನಂತರ ಸಂಸದರು, ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಕಸಬಾ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಕಾಂಗ್ರೆಸ್ ಮುಂಖಂಡ ದೊಡ್ಡಸ್ವಾಮೇಗೌಡ, ದಲಿತ ಮುಖಂಡ ಅಚ್ಚುತಾನಂದ, ಜಿಪಂ ಮಾಜಿ ಸದಸ್ಯರಾದ ಎ.ಎಸ್. ಚನ್ನಬಸಪ್ಪ, ಶಿವರಾಂ, ಡಿ. ರವಿಶಂಕರ್, ಡಿಸಿಸಿ ಸದಸ್ಯ ಧರ್ಮ ಮಂಜುನಾಥ್, ಹೊಸಹಳ್ಳಿ ಸಹಕಾರ ಸಂಘದ ಅಧ್ಯಕ್ಷ ವಿಶಾಲ್ ರವಿ, ದೊಡ್ಡೆಕೊಪ್ಪಲು ಗ್ರಾಪಂ ಅಧ್ಯಕ್ಷ ಬಿ.ಎಂ. ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ರಾಜಶೇಖರ್, ತಾ. ಛಲವಾದಿ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಶಾಂತಿರಾಜ್, ಮುಖಂಡರಾದ ಏಕಾಂಗಿ ಯೋಗೇಶ್, ಎಲ್.ಪಿ. ಉಮೇಶ್, ಎಲ್.ವಿ. ಲಿಂಗಪ್ಪಸ್ವಾಮಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿದ್ದಲಿಂಗಮೂರ್ತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement