ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿಮ್ಮ ಪೋಷಕರಿಗೆ ಸಂಚಾರ ನಿಯಮ ಪಾಲಿಸಲು ಹೇಳಿ

Rashmi Kasaragodu
Updated On : 23 Jan 2014, 1:41 am

ಮೈಸೂರು: ಮಕ್ಕಳು ತಮ್ಮ ತಂದೆ- ತಾಯಿಗೆ ಸಂಚಾರ ನಿಯಮ ಪಾಲಿಸಲು ಹೇಳಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗ ಹಾಗೂ ಮೈಸೂರು ನಗರ ಸಂಚಾರ ಪೊಲೀಸರ ರಾಯಭಾರಿ ಜಾವಗಲ್ ಶ್ರೀನಾಥ್ ಸಲಹೆ ನೀಡಿದರು.
ನಗರ ಸಂಚಾರ ಪೊಲೀಸರು ಪೊಲೀಸ್ ಆಯುಕ್ತರ ಕಚೇರಿ ಆವರಣದ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅವರು ಮಾದರಿ ರಸ್ತೆ ಹಾಗೂ ರಸ್ತೆ ಸುರಕ್ಷತಾ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಹಾಗೂ ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಎನ್.ಎಸ್. ಮೇಘರಿಕ್ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ದೇಶದ ಹೆಮ್ಮೆಯ ಪ್ರತೀಕ ಹಾಗೂ ಭವಿಷ್ಯ. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳಿದುಕೊಂಡು, ಅದನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಕಿರುಹೊತ್ತಿಗೆ ಬಿಡುಗಡೆ: ಮಕ್ಕಳಿಗಾಗಿ ಹೊರತಂದಿರುವ 'ಮೊಳಕೆಯಲ್ಲಿ ತಿದ್ದಿರಿ' ಕಿರು ಹೊತ್ತಿಗೆ ಹಾಗೂ ಕರಪತ್ರಗಳನ್ನು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಬಿಡುಗಡೆಗೊಳಿಸಿ ಮಾತನಾಡಿದರು. ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಮಾತನಾಡಿ, ಪ್ರತಿ ವರ್ಷ ದೇಶದಲ್ಲಿ 1.50 ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ರಾಜ್ಯದಲ್ಲಿ 10 ಸಾವಿರವಿದ್ದು, ಮೈಸೂರು ನಗರದಲ್ಲಿ ಸರಾಸರಿ 124 ಇದೆ. ಸಂಚಾರ ನಿಯಮಗಳನ್ನು ಪಾಲಿಸದರೇ ಮೈಸೂರನ್ನು ಅಪಘಾತ ಮುಕ್ತ ನಗರವಾಗಿಸಬಹುದು ಎಂದರು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಅಶ್ವರೋಹಿದಳದ ಕಮಾಂಡೆಂಟ್ ಜನಾರ್ಧನ್, ಕೆಎಸ್ಆರ್ಪಿ ಕಮಾಂಡೆಂಟ್ ರಾಮೇಗೌಡ ಇದ್ದರು.
ವಸ್ತು ಪ್ರದರ್ಶನ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸ್ ಆಯುಕ್ತರ ಕವಾಯತು ಮೈದಾನದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಮಹೀಂದ್ರಾ ವಾಹನಗಳ ಅಧಿಕೃತ ಮಾರಾಟಗಾರರಾದ ಇಂಡಿಯಾ ಗ್ಯಾರೇಜ್ನವರು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಮಾದರಿ ರಸ್ತೆಯನ್ನು ನಿರ್ಮಿಸಿದ್ದರು.
ರಾಜ್ಯ ಅಗ್ನಿಶಾಮಕ ಮತ್ತು ತರ್ತು ಸೇವೆಗಳ ಇಲಾಖೆಯು ಅಗ್ನಿ ಅನಾಹುತ ಹಾಗೂ ಇತರೆ ದುರಂತಗಳಾದಾಗ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ಅಗ್ನಿಶಾಮಕ ಅಧಿಕಾರಿ ಪಿ. ಚಂದನ್ ಅವರು ಮಕ್ಕಳಿಗೆ ವಿವರಿಸಿದರು. ಇನ್ನೂ ಕೆಎಸ್ಆರ್ಟಿಸಿ ಜಾಣ ಸಾರಿಗೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಲಿನ್ಯ ನಿಯಂತ್ರಣ, ಸಾರಿಗೆ ಇಲಾಖೆಯವರು ವಾಹನಗಳ ಸುಸ್ಥಿತ ಕುರಿತು ಮಾಹಿತಿ ಒದಗಿಸುವ ಮಳಿಗೆ ತೆರೆದಿದ್ದರು.
ರಸ್ತೆ ಸುರಕ್ಷತಾ ಜಾಥಾ: ಪೊಲೀಸ್ ಆಯುಕ್ತರ ಕವಾಯತು ಮೈದಾನದಿಂದ ಹೊರಟ ರಸ್ತೆ ಸುರಕ್ಷತಾ ಜಾಥಾಯಲ್ಲಿ ನಗರದ 32 ಶಾಲೆಗಳಿಂದ ಸಾವಿರಾರು ಮಂದಿ ಮಕ್ಕಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement