ಪೊಲೀಸರ ಸೇವಾ ಕಾರ್ಯ ಸಂಸ್ಮರಣೆ
ಜೆ. ಮಹದೇವ
ಮೈಸೂರು: ಇಂದು ಸಮಾಜದಲ್ಲಿ ಅವಘಡಗಳು ಹೆಚ್ಚಾಗುತ್ತಿವೆ. ಎಲ್ಲಾದರೂ ಕಾನೂನು ವ್ಯವಸ್ಥೆ ಹದಗೆಟ್ಟರೆ ಜನ ಸಾಮಾನ್ಯಾರಾದಿಯಾಗಿ ರಾಜಕಾರಣಿಗಳೂ ಕೂಡ ಪೊಲೀಸರತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಆದರೆ, ಪೊಲೀಸರು ಮೂವತ್ತು ವರ್ಷಗಳ ಹಿಂದೆ ಮಾಡಿದ ಉಪಕಾರವನ್ನು ಇಂದಿಗೂ ಕಾರ್ಯಕ್ರಮದ ಮೂಲಕ ಸ್ಮರಿಸಿಕೊಳ್ಳುವುದನ್ನು ಎಲ್ಲಿಯಾದರೂ ಕಂಡೀರಾ...?
ಹೌದು. ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಮೂವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ತನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿಪಾಲಾದಾಗ ಪೊಲೀಸರು ಸಹಕರಿಸಿದ್ದು ಈ ರೀತಿಯಾಗಿ ಕೃತಜ್ಞತೆ ಸಲ್ಲಿಸಲು ಕಾರಣ.
1984ರಲ್ಲಿ ನಡೆದ ಘಟನೆ: ಈ ಘಟನೆ ನಡೆದು ಬರೋಬ್ಬರಿ ಮೂವತ್ತು ವರ್ಷ ಕಳೆದಿದೆ. 1984, ಮಾ.14ರ ಒಂದು ದಿನ. ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ಈಜಲು ಹೋಗಿ ಸುಳಿಗೆ ಸಿಲುಕಿ ಸಾವಿಗೀಡಾದರು. ಅವರ ಶವಗಳನ್ನು ನೀರಿನಿಂದ ಹೊರ ತೆಗೆಯಲು ಪೋಷಕರು ಹವಣಿಸಿದರೂ ಕೈಗೂಡುವುದಿಲ್ಲ.
ತಮ್ಮ ಮಕ್ಕಳು ಶಾಶ್ವತವಾಗಿ ಕಣ್ಮರೆಯಾದರು. ಆದರೆ, ಅಂತಿಮ ಕ್ಷಣದಲ್ಲಾದರೂ ಮಕ್ಕಳ ಮುಖ ದರ್ಶನ ಮಾಡಿಸಿಕೊಡಿ ಎಂದು ಪೊಲೀಸರ ಬಳಿ ಗೋಳಾಡಿದರು. ಇವರ ದಯನೀಯ ಸ್ಥಿತಿಯನ್ನು ಕಂಡು ಮರುಗಿದ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ ದಿನಪೂರ್ತಿ ಕಷ್ಟಪಟ್ಟು ಕೊನೆಗೂ ಶವಗಳನ್ನು ಹುಡುಕಿ, ಅವರವರ ಪೋಷಕರಿಗೆ ಮಕ್ಕಳ ಕಳೆಬರವನ್ನು ತಲುಪಿಸಿದರು. ಅಂದಿನ ಪೊಲೀಸರ ಸೇವೆಯನ್ನು ಇಂದಿಗೂ ನೆನೆಯುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ವಿಶಿಷ್ಟತೆ ಮೈಸೂರಿನ ಆಯುರ್ವೇದ ಕಾಲೇಜಿನದ್ದಾಗಿದೆ.
ಮತ್ಯಾರಿಗೂ ಬರಬಾರದು: ಮೈಸೂರಿನ ರಘುನಾಥ್(ಎಂಡಿ ವಿದ್ಯಾರ್ಥಿ), ಹಾಸನ ಅವಿನಾಶ್ ರಾವ್, ಉಜಿರೆಯ ಬಾಲಕೃಷ್ಣ, ಚಿಕ್ಕಮಗಳೂರಿನ ಶಶಿಧರ(ಪದವಿ ವಿದ್ಯಾರ್ಥಿ) ವೈದ್ಯಕೀಯ ಶಿಕ್ಷಣ ಕೋರ್ಸ್ ಓದಲು ಬಂದಿದ್ದವರು. ಓದಿನಲ್ಲಿ ಶಿಸ್ತು ಮೂಡಿಸಿಕೊಂಡು, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಕಟಿಬದ್ಧರಾಗಿ ಬಂದಿದ್ದರು. ಆದರೆ, ಅವರು ವೈದ್ಯರಾಗುವ ಮುನ್ನವೇ ಈ ಲೋಕ ತ್ಯಜಿಸಿದ್ದು ದುರ್ದೈವ. ಅವರಿಗಾದ ಸ್ಥಿತಿ ಮತ್ಯಾರಿಗೂ ಬರಬಾರದು ಎಂಬ ಮಹಾದಾಸೆಯಿಂದ ಪ್ರತಿ ವರ್ಷ ಕಾರ್ಯಕ್ರಮ ನಡೆಸಿ, ಒಬ್ಬರು ಪೊಲೀಸ್ ಅಧಿಕಾರಿಯನ್ನು ಆಹ್ವಾನಿಸಿ ನಾಲ್ಕು ಹಿತವಚನ ಬೋಧಿಸುವ ವಾಡಿಕೆ ಮಾಡಿಕೊಂಡು ಬಂದಿದ್ದೇವೆ. ಮಧ್ಯ ಒಂದೆರಡು ವರ್ಷಗಳಲ್ಲಿ ಕಾರಣಾಂತರಗಳಿಂದ ಕಾರ್ಯಕ್ರಮ ನಡೆಸದಿರುವುದನ್ನು ಬಿಟ್ಟರೆ ಮಿಕ್ಕ ಎಲ್ಲ ವರ್ಷಗಳಲ್ಲಿ ತಪ್ಪದೇ ನಡೆಸಿಕೊಂಡು ಬಂದಿದ್ದೇವೆ ಎಂದು ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಸೇವೆಯನ್ನು ವಿಸ್ತರಿಸಿಕೊಳ್ಳಲು ಉತ್ತೇಜನ: ಬುಧವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿದ ದಕ್ಷಿಣ ವಲಯ ಐಜಿಪಿ ಕೆ. ರಾಮಚಂದ್ರರಾವ್ ಮಾತನಾಡಿ, ಸಮಾಜದಲ್ಲಿ ಪೊಲೀಸರೇ ಕಂಟಕವಾಗಿಬಿಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದರ ನಡುವೆ ಎಂದೋ ಪೊಲೀಸರು ಮಾಡಿದ ಸೇವೆಯನ್ನು ಸತತ ಮೂವತ್ತು ವರ್ಷಗಳ ಕಾಲ ಸ್ಮರಿಸಿಕೊಂಡು ಬರುತ್ತಿರುವುದು ನಮ್ಮ ಸೇವೆಯನ್ನು ವಿಸ್ತರಿಸಿಕೊಳ್ಳಲು ಉತ್ತೇಜನ ಸಿಕ್ಕಿದೆ. ವಿದ್ಯಾರ್ಥಿಗಳೂ ಅಷ್ಟೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಜೀವನ ಕಂಡುಕೊಳ್ಳಬೇಕು. ಎಲ್ಲ ಸಂದರ್ಭದಲ್ಲೂ ಪೊಲೀಸರೇ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.