ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭಾಷಾಂತರ ನಿರ್ಲಕ್ಷ್ಯ ಸಲ್ಲದು: ಡಾ. ಸಿ.ಪಿ. ಕೃಷ್ಣಕುಮಾರ್

Rashmi Kasaragodu
Updated On : 23 Jan 2014, 1:40 am

ಮೈಸೂರು: ಭಾಷಾಂತರ ಕಲೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಸಂವಹನ ಪ್ರಕಾಶಕರು ಬುಧವಾರ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಆಚಾರ್ಯ ಮಹಿಮಭಟ್ಟ ಪ್ರಣೀತ ಡಾ. ಎಚ್.ವಿ. ನಾಗರಾಜರಾವ್ ಅನುವಾದಿಸಿರುವ ವ್ಯಕ್ತಿ ವಿವೇಕ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥ ಕುರಿತು ಮಾತನಾಡಿದರು.
ಭಾಷಾಂತರ ಮಹತ್ವದ ಕಲೆ, ಆದರೆ ಭಾಷಾಂತರ ಕಲೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿಯೇ ಭಾಷಾಂತರಕ್ಕೆ ಗೋಷ್ಠಿಗಳೇ ಇರುವುದಿಲ್ಲ. ಮುಂದೆಯಾದರೂ ಭಾಷಾಂತರ ಸಾಹಿತ್ಯ ಕುರಿತ ಗೋಷ್ಠಿಗಳು ಮತ್ತು ಚರ್ಚೆಗಳು ನಡೆಯಬೇಕು. ಸಂಸ್ಕೃತ ಸಾಹಿತ್ಯದಿಂದ ಕನ್ನಡಕ್ಕೆ ಮತ್ತಷ್ಟು ಕೃತಿಗಳು ಭಾಷಾಂತರಗೊಳ್ಳಬೇಕಿದೆ. ಇನ್ನು ಅನೇಕ ಅಲಂಕಾರ ಮತ್ತು ವ್ಯಾಕರಣ ಗ್ರಂಥಗಳು ಭಾಷಾಂತರಗೊಂಡಿಲ್ಲ ಎಂದರು.
ತೀನಂಶ್ರೀ ಅವರ ಹೇಳಿಕೆಯಂತೆ ಕನ್ನಡ ಸಾಹಿತ್ಯ ಸಂಸ್ಕೃತದಿಂದ ಪ್ರೇರಣೆ ಪಡೆದಿದೆ ನಿಜ. ಆದರೆ ಸಂಸ್ಕೃತದ ಪ್ರತಿಕೃತಿ ಆಗಿಲ್ಲ. ಕನ್ನಡಕ್ಕೆ ತನ್ನದೆ ಆದ ಗುಣ ಇದೆ. ಇತ್ತೀಚೆಗೆ ಉಂಡುಂಡೆಯಾಗಿ ಸಂಸ್ಕೃತದಿಂದ ಕನ್ನಡಕ್ಕೆ ಸಾಹಿತ್ಯ ಪ್ರಕಾರಗಳು ಅನುವಾದಗೊಳ್ಳುತ್ತಿವೆ. ಕೆಲವು ಅಪರಿಪೂರ್ಣವಾಗಿವೆ. ಆದ್ದರಿಂದ ನಾಗರಾಜರಾವ್ ಅವರಂತಹ ವಿದ್ವಾಂಸರು ಹೆಚ್ಚೆ ಹೆಚ್ಚು ಕೃತಿಗಳನ್ನು ಭಾಷಾಂತರಿಸಬೇಕು ಎಂದು ಹೇಳಿದರು.
ಸಂಸ್ಕೃತದ ಅಲಂಕಾರ, ಕಾವ್ಯಮೀಮಾಂಸೆ ಮತ್ತು ವ್ಯಾಕರಣವನ್ನು ಡಾ. ಕೆ. ಕೃಷ್ಣಮೂರ್ತಿ ಅವರು ಸಮರ್ಥವಾಗಿ ಭಾಷಾಂತರಿಸಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಡಾ. ಎಚ್.ವಿ. ನಾಗರಾಜರಾವ್ ಭಾಷಾಂತರಿಸಿದ್ದಾರೆ. ಆ ಮೂಲಕ ಅವರು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗೆ ಗೌರವ ತಂದುಕೊಟ್ಟಿದ್ದಾರೆ. ಕನ್ನಡದಲ್ಲಿ ಎಷ್ಟೆ ಕೃತಿಗಳು ಬಂದರೂ ಖರೀದಿಸಿ ಓದುವ ಪ್ರವೃತ್ತಿ ಕನ್ನಡಿಗರಲ್ಲಿ ಕಡಿಮೆಯೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಕೃತಿ ಬಿಡುಗಡೆಗೊಳಿಸಿದರು. ಸಂಸ್ಕೃತ ವಿವಿ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕ ಡಾ. ಎಚ್.ವಿ. ನಾಗರಾಜರಾವ್, ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement