ಮರಳು ಲಾರಿ ಮುಷ್ಕರ ವಾಪಸ್
ಕ.ಪ್ರ. ವಾರ್ತೆ, ಹುಣಸೂರು, ಜ.22
ಕಳೆದೊಂದು ವಾರದಿಂದ ನಡೆಸುತ್ತಿದ್ದ ಮರಳು ಲಾರಿ ಮುಷ್ಕರವನ್ನು ಶಾಸಕ ಮಂಜುನಾಥ್ ಹಾಗೂ ಸಂಬಂಧಿಸಿದ ಅಧಿಕಾರಿಗಳ ಭರವಸೆ ಮೇರೆಗೆ ಹಿಂಪಡೆಯಲಾಗಿದೆ ಎಂದು ತಾಲೂಕು ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಚಂದ್ರು ಹೇಳಿದ್ದಾರೆ. ತಾಲೂಕು ಕಚೇರಿ ಎದುರು ಲಾರಿ ನಿಲ್ಲಿಸಿ ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಮಂಜುನಾಥ್, ಕಂದಾಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಚರ್ಚಿಸಿ, ಸರ್ಕಾರದ ನಿರ್ದೇಶನದಂತೆ ಒಂದು ಲಾರಿಗೆ ದಿನಕ್ಕೊಂದು ಲೋಡ್ಣನಂತೆ ಮರಳು ನೀಡುವುದು, ಹನಗೋಡಿನ ಕಾಡಂಚಿನ ಕಡೆ ಬಿಟ್ಟು ಉಳಿದೆಡೆ ಮರಳು ಹರಾಜು ಹಾಕುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತೆಂದು ತಿಳಿಸಿದ್ದಾರೆ. ಸಂಘದ ಅಧ್ಯಕ್ಷ ವಿಶ್ವನಾಥ್, ಖಜಾಂಚಿ ವೆಂಕಟೇಶ್, ಗೋವಿಂದೇಗೌಡ, 50ಕ್ಕೂ ಹೆಚ್ಚು ಲಾರಿ ಮಾಲೀಕರು ಭಾಗವಹಿಸಿದ್ದರು.
'ಬೆಳವಾಡಿ ಅಭಿವೃದ್ಧಿಗೆ ಕ್ರಮ'
ಮೈಸೂರು: ನಗರಕ್ಕೆ ಹೊಂದಿಕೊಂಡಂತೆ ಇರುವ ಬೆಳವಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಬೆಳವಾಡಿ ಗ್ರಾಮದ ವಿವಿಧ ಬಡಾವಣೆಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದುಕೊರತೆ ಆಲಿಸಿ, ಗ್ರಾಮದ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಳವಾಡಿ ಗ್ರಾಮ ನಗರಕ್ಕೆ ಹೊಂದಿಕೊಂಡಂತೆ ಇದ್ದು, ಎಂಡಿಎ ವತಿಯಿಂದ ಈಗಾಗಲೇ ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ 167 ಲಕ್ಷ ವೆಚ್ಚದಲ್ಲಿ ವಿಜಯನಗರ 4ನೇ ಹಂತ, 3ನೇ ಘಟ್ಟದ ಮಹಿಳಾ ಕಾಲೇಜಿನ ರಸ್ತೆ ಅಗಲೀಕರಣ ಕಾಮಗಾರಿಗೆ ಹಾಗೂ 39.45 ಲಕ್ಷ ವೆಚ್ಚದಲ್ಲಿ ವಿಜಯನಗರ 4ನೇ ಹಂತದ 3ನೇ ಘಟ್ಟ ಬಡಾವಣೆಯಿಂದ ಬೆಳವಾಡಿ ಗ್ರಾಮಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಪೌರ ಕಾರ್ಮಿಕರ ಕಾಲೋನಿಯ ಬನ್ನಾರಿ ಅಮ್ಮನವರ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿ, ಕಾಲೋನಿಗೆ ಯುಜಿಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಾಗಿ ಹೇಳಿದರು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂದೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಪಿಂಚಣಿದಾರರಿಗೆ ಪಿಂಚಣಿ ವತರಿಸಿ, ಉಳಿದವರಿಗೆ ಜ.31ರೊಳಗೆ ಪಿಂಚಣಿ ವಿತರಿಸುವಂತೆ ಉಪ ತಹಸೀಲ್ದಾರ್ಗೆ ಸೂಚಿಸಿದರು.
ಜಿಪಂ ಸದಸ್ಯೆ ಭಾಗ್ಯ ಶಿವಮೂರ್ತಿ, ಶಿವಮೂರ್ತಿ, ರಾಮಚಂದ್ರ, ರಮೇಶ್, ಬೊರಪ್ಪ, ಜಿಪಂ ಮಾಜಿ ಅಧ್ಯಕ್ಷ ಕಡಕೊಳ ನಾಗರಾಜ್, ಎಂ.ಪಿ. ನಾಗರಾಜು, ಮುಖಂಡರಾದ ಸಿದ್ದೇಗೌಡ, ಎಪಿಎಂಸಿ ಸದಸ್ಯ ನಾಗರಾಜು ಇದ್ದರು.
ವಸತಿ ಫಲಾನುಭವಿಗಳಿಗೆ ಚೆಕ್ ವಿತರಣೆ
ಸರಗೂರು: 2013-14ನೇ ಸಾಲಿನ ವಾಜಪೇಯಿ ನಮ್ಮ ಮನೆ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಮಾಡಲು 40 ಮಂದಿ ಫಲಾನುಭವಿಗಳಿಗೆ ಶಾಸಕ ಎಸ್. ಚಿಕ್ಕಮಾದು ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.
ನಂತರ ಅವರು ಮಾತನಾಡಿ, ಪಟ್ಟಣದ 11 ವಾರ್ಡಿನಲ್ಲಿ ಮೀಸಲಾತಿ ಅನ್ವಯದ ಮೇರೆಗೆ ಅಡಳಿತಾತ್ಮಕ ದೃಷ್ಟಿಯಿಂದ ಎಲ್ಲ ಸದಸ್ಯರು ಒಮ್ಮತದಿಂದ ನಿರ್ಣಯ ಮಾಡಿ ಕೆಲವರಿಗೆ ಮಾತ್ರ ಮಂಜೂರಾತಿ ಆದೇಶ ಪತ್ರಗಳನ್ನು ನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಪಪಂ ಮುಂದೆ ಚರಂಡಿ ಕಾಮಗಾರಿ ಸ್ಥಗಿತ ಗೊಂಡಿದೆ. ಅದನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಆಗಲು 250 ಮೀ. ಬದಲು 150 ಮೀ. ಚರಂಡಿ ನಿರ್ಮಿಸಿ ಎಂದು ಸೂಚಿಸಿದರು. ಫೆಬ್ರವರಿ ಮೊದಲ ವಾರದಲ್ಲಿ ವಾಜಪೇಯಿ ಆಶ್ರಯ ಯೋಜನೆ ನಿವೇಶನ ಸಾಗುವಳಿ ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಂದರಾಜು ಮಾತನಾಡಿದರು. ಪಪಂ ಅಧ್ಯಕ್ಷೆ ಪದ್ಮಾ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಂದರಾಜು, ಸದಸ್ಯ ಎಸ್.ಎನ್. ನಾಗರಾಜು, ಕಲೀಲ್, ಬೆಳಗಮ್ಮ ರಂಗಯ್ಯ, ಪ್ರಭುಸ್ವಾಮಿ, ಶ್ರೀನಿವಾಸ್, ಎಂ.ಸಿ. ದೊಡ್ಡನಾಯಕ, ಚಿಕ್ಕವೀರನಾಯಕ, ಕರಿಬಸವಯ್ಯ, ಮೃತ್ಯುಂಜಯ ಇದ್ದರು.
ಹುಲ್ಲಹಳ್ಳಿ ನಾಲೆಗೆ ನೀರು ಹರಿಸಲು ಆಗ್ರಹ
ಸುತ್ತೂರು: ಹುಲ್ಲಹಳ್ಳಿಯ ನಾಲೆಯ ಹೂಳು ತೆಗೆದು ಫೆ.10ರೊಳಗೆ ನೀರು ಬಿಡುವಂತೆ ಸಿಎಂ ಅವರಿಗೆ ಮನವಿ ಸಲ್ಲಿಸಲು ಹುಲ್ಲಹಳ್ಳಿ ನಾಲಾ ಹೋರಾಟ ಸಮಿತಿಯು ಜ.23ರಂದು ಸಾಲುಂಡಿ ಜಯಪ್ಪ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಲಿದೆ. ಈ ನಾಲೆಯು ಸುಮಾರು ವರ್ಷಗಳಿಂದ ಜೊಂಡು ಮತ್ತು ಮಣ್ಣಿನಿಂದ ಮುಚ್ಚಿ ಹೋಗಿದ್ದು, ಇದನ್ನು ತೆಗೆದು ಬೇಸಿಗೆ ಬೆಳೆಗೆ ನಾಲೆಯ ಕೊನೆ ಭಾಗದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಕೋರಲಾಗುವುದು. ರೈತ ಮುಖಂಡರಾದ ಸುತ್ತೂರು ಲಕ್ಷ್ಮಣನಾಯಕ, ಬೆಳಗಲಿ ಮಹೇಶ, ಮಹದೇವ, ರವಿ, ಮರಿನಂಜಪ್ಪ, ಶಿವು, ಸತ್ಯನಾರಾಯಣ, ನಟರಾಜು, ಪುಟ್ಟಸ್ವಾಮಿ, ಸೋಮನಾಯಕ, ಸೋಮಣ್ಣ, ಶಿವಮಲ್ಲಸ್ವಾಮಿ, ನಾಗ, ನಾಗರಾಜು, ಮಲ್ಲೇಶ ಭಾಗವಹಿಸುವರು.
ದೊಡ್ಡಹುಂಡಿ ವೃದ್ಧ ನಾಪತ್ತೆ
ಮೈಸೂರು: ತಾಲೂಕಿನ ಜಯಪುರ ಹೋಬಳಿ ದೊಡ್ಡಹುಂಡಿ ನಿವಾಸಿ ಲೇ. ಚಿಕ್ಕಮಾಲೇಗೌಡ ಎಂಬವರ ಪುತ್ರ ಪುಟ್ಟಬಸವೇಗೌಡ(75) ಮೂರು ತಿಂಗಳ ಹಿಂದೆ ಮೈಸೂರಿನ ದೇವಸ್ಥಾನಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2595781 ಸಂಪರ್ಕಿಸಲು ಜಯಪುರ ಠಾಣೆ ಎಎಸ್ಐ ಮಂಗಳ ಕೋರಿದ್ದಾರೆ.