ಅಂಗನವಾಡಿಗೆ ಅರ್ಜಿ ಆಹ್ವಾನ
ಎಚ್.ಡಿ. ಕೋಟೆ: ತಾಲೂಕಿನ 3 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ 5 ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು 18 ರಿಂದ 44 ವರ್ಷದೊಳಗಿನವರು ಫೆ.12 ರೊಳಗೆ ಪೂರ್ಣ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ತಾಲೂಕು ಸಿಡಿಪಿಒ ರಾಮಕೃಷ್ಣ ತಿಳಿಸಿದ್ದಾರೆ. ತಾಲೂಕಿನ ಹುಲಿಕುರ, ದಡದಹಳ್ಳಿ ಹಾಡಿ, ದೊಡ್ಡಕೆರೆ ಕಾವಲ್ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಯು, ಅಂತೆಯೇ ಚಾಮಲಾಪುರ, ಸೋನಹಳ್ಳಿ ಹಾಡಿ, ಕೆ.ಎಡತೊರೆ, ಎಂ.ಸಿ. ತೊಳಲು, ಕರಳಕಟ್ಟೆ ಅಡಿಯಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು ಆಸಕ್ತರು ತಮ್ಮ ಪೂರ್ಣ ಮಾಹಿತಿ ಭರ್ತಿ ಮಾಡಿ ಫೆ.12 ರೊಳಗೆ ತಮ್ಮ ಅರ್ಜಿ ಸಲ್ಲಿಸಬಹುದು.
ಮಹದೇವ ತಾತಾರ ಗಣಾರಾಧನೆ
ಎಚ್.ಡಿ. ಕೋಟೆ: ತಾಲೂಕಿನ ಅಣ್ಣೂರು- ಹೊಸಹಳ್ಳಿ ಗ್ರಾಮದ ಸದ್ಗುರು ಮಹದೇವ ತಾತಾ ಅವರ 7ನೇ ವಾರ್ಷಿಕ ಗಣಾರಾಧನೆ ಕಾರ್ಯಕ್ರಮವು ಜ. 24 ರಂದು ನಡೆಯಲಿದೆ. ಅಂದು ಬೆಳಗ್ಗೆ 5ಕ್ಕೆ ತಾತಾ ಅವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಂಗಳಾರತಿ ಜರುಗಲಿದೆ. ಬೆಳಗ್ಗೆ 9ಕ್ಕೆ ಚಂದ್ರಮೌಳೇಶ್ವರ ಸ್ವಾಮೀಜಿ ಪಾದಪೂಜೆಯ ನಂತರ ಪ್ರಸಾದ ವಿನಿಯೋಗ ನಡೆಯುತ್ತದೆ. ಸಂಜೆ 6ಕ್ಕೆ ತಾತಾ ಅವರ ಭಾವಚಿತ್ರದ ಮೆರವಣಿಗೆ ನಡೆಯುವುದಾಗಿ ಗಣಾರಾಧನಾ ಸಮಿತಿ ತಿಳಿಸಿದೆ.
ಬೈಕ್ಗಳ ಡಿಕ್ಕಿ ಒಬ್ಬನಿಗೆ ಗಾಯ
ಎಚ್.ಡಿ. ಕೋಟೆ: ಮೈಸೂರು- ಮಾನಂದವಾಡಿ ರಸ್ತೆಯ ಎಚ್. ಮಟಕೆರೆ ಗೇಟ್ ಬಳಿ ಎರಡು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಾರನೊಬ್ಬರು ಗಾಯಗೊಂಡಿದ್ದಾರೆ. ತಾಲೂಕಿನ ಹೈರಿಗೆ ಗ್ರಾಮದ ಬಸವರಾಜು ಗಾಯಗೊಂಡವರು. ಎಚ್.ಡಿ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.