ಡಿಮ್ಯಾಂಡ್ಗೆ ಹೈರಾಣ
ಹ್ಯಾಂಡ್ಪೋಸ್ಟ್: ಎಚ್.ಡಿ. ಕೋಟೆ ತಾಲೂಕಿನಲ್ಲಿ 32 ಗ್ರಾಪಂಗಳಲ್ಲಿ ಮನೆಗೆ ಸಂಬಂಧಿಸಿದಂತೆ ಅಸಸ್ಸ್ಮೆಂಟ್, ಡಿಮ್ಯಾಂಡ್ ಕಾಪಿ ಪಡೆಯಲು ನಾಗರಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಆಸ್ತಿ ವಿವರಗಳನ್ನು ಪಡೆಯಲು ಫಾರಂ- 9 ಹಾಗೂ ಫಾರಂ- 11ರಲ್ಲಿ ದಾಖಲಾತಿಗಳನ್ನು ಭರ್ತಿ ಮಾಡಿ ಗ್ರಾಪಂ ಕಾರ್ಯದರ್ಶಿ ಅಥವಾ ಪಿಡಿಒಗೆ ಅರ್ಜಿ ಸಲ್ಲಿಸಿದರೆ, ಸಹಿ ಮಾಡುತ್ತಾರೆ. ಆದರೆ ವ್ಯವಸ್ಥೆ ಕಂಪ್ಯೂಟರೀಕರಣ ಆಗದಿರುವುದರಿಂದ ನಾಗರಿಕರಿಗೆ ಯಾವುದೇ ಅನುಕೂಲಗಳಾಗುತ್ತಿಲ್ಲ. ಈ ಬಗ್ಗೆ ಗ್ರಾಪಂಗಳಲ್ಲಿ ವಿಚಾರಿಸಿದರೆ ನಮ್ಮ ಕಂಪ್ಯೂಟರ್ಗಳಲ್ಲಿ ಸಾಫ್ಟ್ವೇರ್ ಅಳವಡಿಸಿಲ್ಲ. ಆದ್ದರಿಂದ ದಾಖಲಾತಿಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕಷ್ಟ ತೋಡಿಕೊಳ್ಳುತ್ತಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ತುರ್ತು ಕ್ರಮ ವಹಿಸಬೇಕಾಗಿದೆ.
ಫೆ.15ಕ್ಕೆ ಸರ್ಕಾರಿ ಪ್ರೌಢಶಾಲೆಯ ವಜ್ರಮಹೋತ್ಸವ
ಪಿರಿಯಾಪಟ್ಟಣ: ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ಧರ್ಮಪ್ರವರ್ತಕ ಬೆಂಗಳೂರು ಸುಬ್ಬಣ್ಣನವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಫ್ರೌಢಶಾಲಾ ವಿಭಾಗ) ವಜ್ರ ಮಹೋತ್ಸವವನ್ನು ಫೆ.15 ರಂದು ಅದ್ಧೂರಿಯಾಗಿ ಆಚರಿಸಲು ವಜ್ರಮಹೋತ್ಸವ ಆಚರಣಾ ಸಮಿತಿಯಲ್ಲಿ ತೀರ್ಮಾನಿಸಲಾಯಿತು. ಫ್ರೌಢಶಾಲೆ ಪ್ರಾರಂಭವಾಗಿ 60 ವರ್ಷ ಕಳೆದು 61ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ತಾಲೂಕಿನ ಗಣ್ಯ ವ್ಯಕ್ತಿಗಳು ಒಟ್ಟಾಗಿ ವಜ್ರ ಮಹೋತ್ಸವ ಆಚರಿಸಲು ತೀರ್ಮಾನಿಸಿದ್ದು, ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಸಂಸದ ಎಚ್. ವಿಶ್ವನಾಥ್ ಅವರನ್ನು ಆಹ್ವಾನಿಸಲು ಹಾಗೂ ಶಾಸಕ ಕೆ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವಸಂತರಾಜೇ ಅರಸ್, ಸಮಿತಿಯ ಪದಾಧಿಕಾರಿಗಳಾದ ಪಿ.ಟಿ. ರಂಗಸ್ವಾಮಿ, ಸಾಹಿತಿ ಪಿ.ಕೆ.ರಾಜಶೇಖರ್, ಪಪಂ ಸದಸ್ಯರಾದ ಪಿ.ವಿ. ನಂಜುಂಡಸ್ವಾಮಿ, ವೇಣುಗೋಪಾಲ್, ವಿಜ್ಞಾನಿ ವಸಂತ್ ತಿಮಕಾಪುರ, ಮಾನ್ಸೂನ್ಚಂದ್ರು, ಜಹೂರ್ಅಲಿ, ತಮ್ಮಣ್ಣಯ್ಯ, ಅಣ್ಣಯ್ಯ, ವೆಂಕಟಯ್ಯ ಇದ್ದರು.